"ಕೊಪ್ಪರಿಗೆಯ ಬೆಲ್ಲ" (5) - ಇಂತಿ ನನ್ನ ಪ್ರೀತಿಯ ಲಪ್ಪಿ...!




ಇಂತಿ ನನ್ನ ಪ್ರೀತಿಯ ಲಪ್ಪಿ...!


  ಅಂತೂ  ನಮ್ಮ ಬಸ್ಸು ಭುಸುಗುಡುತ್ತಾ ಭೂತನೊಣಿ ಏರು ಹತ್ತಿ ಇಳಿಯಲು ನಾವು ನಮ್ಮ ಲಗ್ಗೇಜ್‌ಗಳನ್ನು ಹಿಡಿದು ಬಾಗಿಲ ಬಳಿ ಬಂದು ನಿಂತೆವು. ‘ಯರ‍್ರೀ ಸಮ್ಗೊಡ್ ‘ ಎಂಬ ಕಂಡಕ್ಟರ್ ಕರೆಗೆ ಬಸ್ಸು ನಿಲ್ಲಲು, ನಾವು  ಅಬ್ಬಾ! ಅಂತೂ ಊರು ಸೇರಿದೆವು ಎಂಬ ನಿಟ್ಟುಸಿರಿನಿಂದ ಬಸ್ಸು ಇಳಿದೆವು.
  ಸುತ್ತ ಕಣ್ಣು  ಹಾಯಿಸಿದಷ್ಟೂ ಹಸಿರು, ದಿಗಂತ ಮುಟ್ಟುವ ತೆಂಗು, ನೀರೆಯರ ಸೆರಗಿನಂತೆ ನಳನಳಿಸುತ್ತಿರುವ ಪೈರು. ಬೀಸುವ ತಂಗಾಳಿಗೆ ಮೈ ಒಡ್ಡಿದಾಗ ಸಿಗುವ ಆಹ್ಲಾದತೆ ಭೂಸ್ವರ್ಗಕ್ಕೆ ಕಾಲಿಟ್ಟಿರುವುದ ಪ್ರಮಾಣಿಸುತ್ತಿತ್ತು. 
   ಬಸ್ಸಿನ ಬುಡಕ್ಕೆ ನಮ್ಮನ್ನು ಕರೆದೊಯ್ಯಲು ಬಂದಿದ್ದ ‘ಲಪ್ಪಿ’ ನನ್ನ ನೋಡಿದೊಡನೆ, "ಬಂದ್ರಾ ಪುಟ್ಟಮ್ಮ ಆರಾಮಾ?" ಎಂದು ಎಲೆ ಅಡಿಕೆ ತುಂಬಿದ ಬಾಯಲ್ಲಿ ನಮ್ಮನ್ನು ಸ್ವಾಗತಿಸುತ್ತಾ ನಮ್ಮ ಕೈಯಿಂದ ಲಗ್ಗೇಜ್‌ಗಳನ್ನು ತೆಗೆದುಕೊಂಡು, ತಲೆಮೇಲೋಂದು ಸೊಂಟದ  ಮೇಲೊಂದು ಚಚ್ಚಿ ಮುನ್ನೆಡೆದಳು. ಆಕೆಯನ್ನು ಹಿಂಬಾಳಿಸುತ್ತಾ ನಾವುಗಳು ಹೆಜ್ಜೆ ಹಾಕಿದೆವು. "ಕಾಲಬದಿ ಜೋಪಾನ, ಮೆಲ್ಲ ಹೆಜ್ಜೆ ಹಾಕಿ" ಎಂದು ಆಗ್ಗಾಗ್ಗೆ ಬರುತ್ತಿದ್ದ ಆಕೆಯ ಎಚ್ಚರಿಕೆ  ಮಾತುಗಳನ್ನು ನಾವು ಬಹಳ ಗಂಭೀರವಾಗಿ  ಪರಿಗಣಿಸಲು, ಆಕೆ ಸಾರ ದಾಟಿ ತೋಟ ಸೇರಿದರೆ, ನಾವು ಆಗತಾನೆ ಕೊನೆಯ ಗದ್ದೆಗೆ ಬಂದಿಳಿದು ಸಾರದ ಕಡೆ ಮುಖ ಮಾಡಿದ್ದೆವು.

   ಲಕ್ಷ್ಮಿ: ನಾನು ಹುಟ್ಟಿದ ಸಮಯದಲ್ಲಿ ನನ್ನ ಅಜ್ಜನ  ಮನೆ ಕೆಲಸಕ್ಕೆಂದು ಬಂದು ಸೇರಿದವಳು. ಅಂದಿನಿಂದ  ಇಂದಿನವರೆಗೂ ನಿಷ್ಠೆಯಿಂದ ದುಡಿದ ಆಕೆ ನಮ್ಮ ಮನೆಯವರಲ್ಲಿ ತಾನೂ ಒಬ್ಬಳಾಗಿದ್ದಾಳೆ. ನಾನು ಚಿಕ್ಕವಳಾಗಿದ್ದಾಗ, ನನ್ನ ಅಮ್ಮನ ಬಳಿ ಇರುವುದಕ್ಕಿಂತ ಆಕೆಯ ಜೊತೆ ಸಮಯ ಕಳೆದಿದ್ದೇ ಹೆಚ್ಚು; ನನಗೆ ಸ್ನಾನ ಮಾಡಿಸುವುದು ಹಾಗು ಉದಾಸೀನವಿಲ್ಲದೆ ಕಾಡಿನಿಂದ ಮತ್ತಿ ಸೊಪ್ಪು ತಂದು ಗುಳ ಮಾಡಿ ಎರೆಯುವುದು, ಆಡಿಸುವುದು, ನನ್ನನ್ನು ಸೊಂಟದ ಮೇಲೆ ಚಚ್ಚಿಕೊಂಡೇ ಆಕೆ ಜಾನುವಾರು ಬಿಡುವುದು, ಕೊಟ್ಟಿಗೆಗೆ ಹುಲ್ಲು ಹಾಕುವುದು, ತೊಟಕ್ಕೆ ಹೊಗುವುದು, ಗಿಡಗಳಿಗೆ ನೀರು ಹಾಕುವುದು ಮಾಡುತ್ತಿದ್ದಳು. ನಾನು ಪ್ರೀತಿ ಇಂದ ಆಕೆಗೆ ಲಪ್ಪಿ ಎಂದು ಕರೆಯುತ್ತಿದ್ದೆ. ನನಗೆ ಯಾವಾಗಲೂ ಆಕೆ ಹಾಕುತ್ತಿದ್ದ ಮಂಡಾಳೆಯ ಮೇಲೆಯೇ  ಕಣ್ಣು. ಅವಳು ಅತ್ತ ಹೋದಂತೆ ಮಂಡಾಳೆ ತೊಟ್ಟು ಅವಳ ಸಗಣಿ ಮೆತ್ತಿದ ಚಪ್ಪಲಿ ಹಾಕಿಕೊಂಡು ಕೊಟ್ಟಿಗೆಯ ಒಳಗೆ ಹೊರಗೆ ತಿರುಗುವುದೇ ನನಗೆ ಪ್ರತಿಷ್ಠೆಯ  ಕೆಲಸ. 
   ಇನ್ನು ನನ್ನನ್ನು ಸದಾ ಕಾಲ ಹೊತ್ತು ತಿರುಗಿಸಿದ ಆಕೆಗಾಗಿ ನಾನು ಪ್ರೀತಿಯಿಂದ ಮಾಡುತ್ತಿದ್ದುದು ಮೂರೇ ಮೂರು  ಕೆಲಸ; ಅವಳು ಊಟಕ್ಕೆ ಕುಳಿತಾಗ ಬಾರೀ ಬಾಯೋಪಚಾರ ಮಾಡುವುದು ಊಟ ಆದ ನಂತರ ಅವಳಿಗಾಗಿ ಉಪ್ಪರಿಗೆಯಿಂದ ಎಲೆ ಅಡಿಕೆ ತಂದು ಕೊಡುವುದು ಇದು ನನ್ನ ಬಹು ನೆಚ್ಚಿನ ಕೆಲಸ.

 ಕೊನೆಯದಾಗಿ ಬಾಯಿಗೆ ಪುರ್ಸೊತ್ತು ಇಲ್ಲದೆ  ದಿನವಿಡೀ ಮಾತನಾಡಿ ಹಾಗು ಮಾತನಾಡಿಸಲು ಪ್ರಯತ್ನಿಸಿ ಆಕೆಯ ತಲೆ ತಿನ್ನುವುದು. ನಾನು ಆಡುವ ಒಂದೊಂದು ಮಾತುಗಳಿಗೂ ಆಕೆಯ ಬಳಿ ಒಹ್ ಹೊ! ಲ್ಯಾಕಿತ್ತು! ಹೌದ್ಹಾ! ಎಂಬ ಪೂರ್ವ ನಿಯೋಜಿತ ಪ್ರತಿಕ್ರಿಯೆಗಳಿದ್ದವು. ಆಕೆಯನ್ನು ಮಾತಿಗೆ ಬಿಟ್ಟರೆ ಅವಳು ರಾಗ ಎಳೆಯುತ್ತ ಕೇಳುವುದು ಇಷ್ಟೇ, ಇದೆಂತ ಡ್ರೆಸ್ಸು? ಚಂದ್ ಇತ್ತು , ಕಿವಿಗ್ ಎಂತಕ್ ಹಾಕಳ್ಳ? ತೂತ ಮುಚ್ಹೋದ್ರೆ ಕಡಿಗೆ! ನೋಡಿ ನಿಮ್ ಮಾವ ಬೈತ್ರು, ಅಮ್ಮ ಕಲ್ಸಳ ಬಂದಾಗ ಬ್ಲೌಸು ಸೀರೆ ಕೊಟ್ ಹೋಗಿದ್ರು , ಅಪ್ಪಯ್ಯ ಹುಷಾರಿದ್ರ? ಅವರೆಂತಕ್ ಬರ್ಲಾ? ನೀವ್ ಇಲ್ಲೇ ಒಂದ್ ವಾರ ಇದ್ ಹೋಗಿ! ಗೇರ್ ಬೀಜ ಸುಟ್ ಕೊಡ್ತೆ ಕಡಿಗೆ ಎಂದು ಆಮಿಷ ಒಡ್ಡಲು ಅದಕ್ಕೆ ಪ್ರತಿಯಾಗಿ, ಅದೆಲ್ಲ ಬೇಡ ಜಸ್ಟ್ ಟೇಕ್ ಮಿ ಟು ಯುವರ್ ಹೌಸ್! ಎಂದು ಹೇಳಿ ಓಡುತಿದ್ದೆ. 
   ನನ್ನ ದೃಷ್ಟಿ ಕೋನದಲ್ಲಿ ಆಕೆ ಪ್ರಕೃತಿಯ ಮಡಿಲಲ್ಲಿ ಬದುಕುತ್ತಿರುವ ಕರ್ಮಜೀವಿ, ಪ್ರಪಂಚವನ್ನು ಅನುಭವಿಸಿ ಅರ್ಥ ಮಾಡಿಕೊಂಡವಳು. ಕೊಂಪೆಯೊಳಗೆ ಒಬ್ಬಂಟಿಯಾಗಿ ಜೀವಿಸುತ್ತಿದ್ದರೂ ಸಾರ್ಥಕತೆಯ ಜೀವನ ಕಂಡುಕೊಂಡವಳು ಆದ್ದರಿಂದ ಆಕೆಯ ಜೊತೆಗಿನ ಒಡನಾಟವೇ ನನಗೆ ಅಗಾಧವಾದ ಚೇತನವನ್ನು ತುಂಬುತ್ತಿತ್ತು.
***
   ಚಳಿಗಾಲದ ಬಿಸಿಲಿನ ಪ್ರಖರತೆ ಎಷ್ಟಿತ್ತೆಂದರೆ ಆಗತಾನೆ ಸಮಯ ೧೦:೩೦ ದಾಟಿದ್ದರು ಮದ್ಯಾಹ್ನದ ೨ ಘಂಟೆಯ ಶಾಖಕ್ಕೇನೂ ಕಡಿಮೆ ಇರಲಿಲ್ಲ. ನೋಡನೋಡುತ್ತಲೇ  ಲಪ್ಪಿಯು ತೋಟದ ಮಧ್ಯೆ ಮಿಂಚಿ ಮರೆಯಾದಳು ನಾವು ಹಗುರವಾಗಿ ಅಡಿಕೆ ಮರದ ಸಾರವನ್ನು ದಾಟುತ್ತಾ ತೋಟದಒಳ ಹೊಕ್ಕು ಅತ್ತ ಇತ್ತ ನೋಡುತ್ತಾ ನಿಧಾನವಾಗಿಯೇ ಬಂದು ನನ್ನ ಚಿಕ್  ಮಾವನ ಮನೆ ಸೇರಿದೆವು. 

ಅವಳು ತ್ವರಿತಗತಿಯಲ್ಲಿ ಹೋಗಿ ನಾವು ಬರುತ್ತಿರುವ  ವಿಷಯ ತಿಳಿಸಲು ನನ್ನ ಅತ್ತೆ  ಮನೆಯ ಜಗಲಿಯಲ್ಲಿ ನಿಂತು ನಮ್ಮನ್ನು ಸ್ವಾಗತಿಸುತ್ತಾ ಗಡಿಯಾರ ನೋಡಿ, "ಯಾವ್ದು, ಭಟ್ರು ಬಸ್ಸಲ್ ಬಂದಿದ್ದೇನೆ? ನೀವ್ ತಿಂಡಿಗೆ ಬರ್ತೀರಾ ಅಂತ ಪತ್ರೊಡೆ ಮಾಡಿದ್ದೆ" ಎಂದರು. ಹಾ! ಎಂದು ಉಸ್ಸಪ್ಪ ಅಂತ ಅಲ್ಲೇ ಜಗಲಿಯ ಮೇಲೆ ಕೂರುತ್ತ ಪತ್ರೊಡೆಗೆ ಹೊಟ್ಟೆಯಲ್ಲಿ ವಿಶೇಷ ಜಾಗ ಇದೆ ಎಂದುಕೊಂಡೆ. ಅಲ್ಲೆಲ್ಲಿಂದನೋ ಓಡಿ ಬಂದ 'ಟಿಂಕು' ಬಾಲ ಅಲ್ಲಾಡಿಸುತ್ತ ನಾಲಿಗೆ ಹೊರಹಾಕುತ್ತ ಹೊಸ ಜನರನ್ನು ನೋಡಿ ತನಗಾದ ಖುಷಿಯನ್ನು ಹೊರಹಾಕಿತು. ಬಸ್ ಸ್ಟಾಪಿನಿಂದ ಸೀನು ಮಾವನ ಮನೆ ಸುಮಾರು ೨ಕಿ. ಮಿ. ಒಂದೇ ಉಸಿರಿನಲ್ಲಿ ಸೀದಾ ಹೋಗುವುದಕ್ಕಿಂತ ಜರ್ನಿ ಬ್ರೇಕ್ ಗೆ ನನ್ನ ಚಿಕ್ಕ ಮಾವನ ಮನೆ ಓಯಸಿಸ್ ಇನ್ ಡೆಸರ್ಟ್ ಇದ್ದಹಾಗೆ. ಇಲ್ಲಿ ಕೂತು ಅತ್ತೆ ಕೈ ಟೀ ಕುಡಿದರೆ ಅದೇನೋ ಖುಷಿ! ಹಾಗೆ ಸುಧಾರಿಸಿಕೊಂಡು ಮತ್ತೆ ಹೊರಡಲು ಅನುವಾದೆವು. "ಅಲ್ವೇ! ಕಾಕಿಕುಡಿ ತಂಬ್ಳಿ ಮಾಡ್ತೀನಿ ಅವರಿಬ್ರಿಗೂ ಇಷ್ಟ  ಊಟ ಮಾಡ್ಕೊಂಡ್ ನಿಧಾನಕ್ ಹೋದ್ರೆ ಸರಿ" ಎಂಬ ಪ್ರಸ್ತಾಪ ತೆಗೆದು ಹಾಕುವಂತಿರಲಿಲ್ಲವಾದರೂ ನಾಳೆ ಊಟಕ್ ಬರ್ತೀವಿ ಎಂಬ ಸಮಜಾಯಿಷಿಯೊಂದಿಗೆ ಸೀನು ಮಾವನ ಮನೆಕಡೆ ನಾವು ಮೂವರು, ಲಪ್ಪಿ ಮತ್ತು ಬಾಲ ಟಿಂಕು ಹೆಜ್ಜೆ ಹಾಕಿದೆವು.
 ದಾರಿಯುದ್ದಕ್ಕೂ ಗೇರು ಮರ, ಮಾವಿನ ಮರ, ಹಲಸಿನ ಮರ, ಅಕೇಶಿಯಾ ಕಾಡು, ನಲ್ಲಿ ಗುಡ್ಡಕ್ಕೆ ಬರುವ ನವಿಲುಗಳು, ಬೇಸಿಗೆಯ ಅತಿಥಿ ಕಾಡುಕೋಣ, ಚಳಿಗಾಲದ ಅತಿಥಿ ಕಾಳಿಂಗ ಸರ್ಪ ಹೀಗೆ  ಹತ್ತು ಹಲವು ವಿಷಯಗಳ ಬಗ್ಗೆ ಅವಳ ನಮ್ಮ ಚರ್ಚೆಗಳಾದವು. ಕೊನೆಯದಾಗಿ ಆಕೆ, “ಇಲ್ಲಿ ಎಂಥ ಇತ್ತು ಬೇಡ್ವಾ? ನೆಟ್ವರ್ಕ್ ಸಿಕ್ಕೋಲ, ಕರೆಂಟ್ ಇರಲ್ಲ. ಆದ್ರೆ ನಮ್ಗ್ ಅಡ್ಡಿಲ್ಲ!” ಎನ್ನಲು ಡೆಸ್ಟಿನೇಷನ್ ತಲುಪಿದೆವು.



Comments

  1. Recalling your childhood,very nice .

    ReplyDelete
  2. Beautiful pics, u are so blessed that you are from that place mam, I am Navneeth from 8th D, FIS, I wish I could visit that place once.

    ReplyDelete
    Replies
    1. True, I'm fortunate to spend my childhood close to nature :) Yes it's an all time wish :)

      Delete

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "