"ಕೊಪ್ಪರಿಗೆಯ ಬೆಲ್ಲ" (6) - ಇಂಗಾಲದ - ಡೈ- ಆಕ್ಸೈಡ್ ಗೆ ಬೈ ಬೈ!
ಇಂಗಾಲದ ಡೈ ಆಕ್ಸೈಡ್ ಗೆ ಬೈ ಬೈ!
ಪ್ರಯಾಣದ ಸುಸ್ತಿಗೋ ಬಿಸಿಲಿನ ಬೇಗೆಗೋ ಹತ್ತಿದ ನಿದ್ದೆಯಿಂದ ಎಚ್ಚರವಾದಾಗ ಸಮಯ ೫ ಘಂಟೆ! ಆಗ ತಾನೇ ಕರೆದ ನೊರೆಯುಕ್ತ ಹಸುವಿನ ಹಾಲು ಹಾಗು ಸಮಯಕ್ಕೆ ಮೊದಲೇ ಫಲಪಕ್ವಾವಾದ ಹಲಸಿನ ತೊಳೆಯ ಅಪೋಶನವಾಯಿತು.
ಇನ್ನು ಏನು ಬೇಕು ಈ ಜೀವಕ್ಕೆ? ಸುಂದರವಾದ ಪ್ರಕೃತಿ ಇಲ್ಲಿ ಯಾರೂ ಪ್ರಮುಖರಲ್ಲ. ಇದುವೇ ಮನುಷ್ಯರ, ಪ್ರಾಣಿ-ಪಕ್ಷಿಗಳ ಮತ್ತು ಕೀಟಗಳ ಅವಿಭಕ್ತ ಕುಟುಂಬ. ವಿಧವಿಧವಾದ ಹೂ ಬಳ್ಳಿಗಳ, ಹಣ್ಣು ಕಾಯಿಗಳ ಇರುವಳಿ ಪ್ರಕೃತಿ ಮಾತೆಯ ಬಳುವಳಿ.
ಮಳ್ಳಿ ಮಳ್ಳಿ ಮಿಂಚುಳ್ಳಿಯ ಸಂಭಾಷಣೆ, ಜಾಣ ಜಾಣ ಕಾಜಾಣಗಳ ಸೊಕ್ಕಿನ ಹಾರಾಟ, ಕೆಂಪು ಮೀಸೆ ಪಿಕಳಾರಗಳ ಪಿಸುಮಾತು ಕೇಳುತ್ತಿರಲು ಪೂರ್ಣ ಚಂದ್ರ ತೇಜಸ್ವಿಯವರ "ಪರಿಸರದ ಕಥೆ" ಪುಸ್ತಕ ಮನಸ್ಸಿನಲ್ಲಿ ಸುಳಿದು ಹೋಯಿತು.
ಪಾಗಾರದ ಮೇಲೆ ಕೂತು ನಮ್ಮ ಪಂಚಾಯ್ತ್ಗೆ ಶುರುವಾಯಿತು. ಅವರ ಇವರ ಮನೆ ಕಥೆಗಳು, ಯಾರು ಹುಟ್ಟಿದರು, ಯಾರು ಸತ್ತರು, ಯಾರು ಬಿದ್ದರು, ಯಾರು ನೆಟ್ಟರು ಹೀಗೆ ಹತ್ತು ಹಲವು ಊರಿನ ವಿಷಯಗಳು ತೇಲಿ ಬರಲು ಅದೆಲ್ಲವೂ ನನ್ನ ಗಣನೆಗೆ ಮೀರಿದ್ದವು. ಗೋಧೂಳಿ ಸಮಯ, ಇತ್ತ ಲಪ್ಪಿ ತನ್ನ ಕೆಲಸಗಳನ್ನು ಮುಗಿಸಿ ಒಂದು ಪುಟ್ಟ ಔಷಧಿ ಬಾಟಲ್ ನಲ್ಲಿ ಆ ರಾತ್ರಿ ತನಗೆ ಕುಡಿಯಲು ಬೇಕಾದ ಹಾಲು ತೆಗುದುಕೊಂಡು ಮುಳುಗಡೆ ಸಮೀಪವಿರುವ ತನ್ನ ಮನೆಯತ್ತ ಹೆಜ್ಜೆ ಹಾಕಲು ಹಿಂದಿನಿಂದ "ನಾನು ಬರ್ತೀನಿ ನಿಮ್ ಮನೆಗ್ ಕರ್ಕೊಂಡ್ ಹೋಗೆ" ಎಂದೆ. ಹೀಗೆ ನಾನು ಎಷ್ಟೋ ಸಲ ಕೇಳಿ ಸೋತಿದ್ದೆ. ಅವಳು ಏನೋ ನೆವ ಹೇಳಿ ತಪ್ಪಿಸಿಕೊಳ್ಳುತ್ತಿದ್ದಳು. ಆಕೆ ಅತ್ತ ಹೋಗಲು ಇತ್ತ ನನ್ನ ಚಿಕ್ಕ ಮಾವ, "ಒಹ್! ಅಪರೂಪದೋರು ಏನ್ ಸಮಾಚಾರ?" ಎನ್ನುತ್ತಾ ಬಂದರು.
ಕಳೆದ ದಿನ ಮೇಯಲು ಹೋದ 'ಅಂಬಿ' ಮನೆಗೆ ಬಾರದಿದ್ದುದು ಮಾವನ ಆಗಮನದ ಉದ್ದೇಶವಾಗಿತ್ತು. ಅಂಬಿಯನ್ನು ಹುಡುಕಲು ನಾಳೆ ಮುಳುಗಡೆ ನೀರಿನ ಬಳಿ ಹೋಗುವುದಕ್ಕೆ ಜನ ಗೊತ್ತು ಮಾಡಲು ಹೋಗಿದ್ದರು. ಜನ ಸಿಗದ ಕರಣ ನಮ್ಮೆಲ್ಲರನ್ನು ಪಾಗಾರದ ಮೇಲೆ ಕೂತಿದ್ದು ನೋಡಿ ಇತ್ತ ಧಾವಿಸಿದ್ದರು. ಬೆಳಗ್ಗೆ ಚಿಕ್ ಮಾವನ ಮನೆಗೆ ಹೋಗಿದ್ದರೂ ಅಲ್ಲಿ ಅವರ ಭೇಟಿ ಆಗಿರಲಿಲ್ಲ.
ಉತ್ಸಾಹ ಹೀನವಾದ ಕಣ್ಣುಗಳು, ಗಂಟಿಕ್ಕಿದ ಹುಬ್ಬು, ಎತ್ತಲೋ ಏನನ್ನೋ ನೋಡುತ್ತಾ ಇನ್ನೇನನ್ನೋ ಚಿಂತಿಸುತ್ತಿರುವ ಮುಖವನ್ನು ನೋಡಿಯೇ ಪರಿಸ್ಥಿತಿಯ ಗಂಭೀರತೆಯನ್ನು ಅರ್ಥೈಸಬಹುದಾಗಿತ್ತು.ಪಾಗಾರದ ಪಕ್ಕದ ಗೋಡೆಗೆ ಒರಗಿಸಿಟ್ಟ ಏಣಿಗೆ ಒರಗಿನಿಂತು ನಡೆದ ಕಥೆಯನ್ನು ವಿವರಿಸಿದರು. ಕಳೆದ ದಿನ ಬೇರೆ ದನಿಕ್ಳೊಂದಿಗೆ ಮೇಯಲು ನೇರಳೆ ಮನೆ ಬ್ಯಾಣಕ್ಕೆ ಹೋದ ಹಸು ಅಂಬಿ, ಸಂಜೆಯವೇಳೆಗೆ ಕೊಟ್ಟಿಗೆಗೆ ಎಲ್ಲಾ ಜಾನುವಾರುಗಳು ಬಂದರೂ ಇದು ಮಾತ್ರ ಕತ್ತಲಾದರೂ ಹಿಂತಿರುಗಿರಲಿಲ್ಲ. ಕೆಲವೊಮ್ಮೆ ಮೇಯುತ್ತಾ ಹಸುಗಳು ಹೇಗೆ ದಾರಿ ತಪ್ಪುವುದು ಸಹಜವಾದರೂ ಮಾರನೆಯ ದಿನ ಮನೆ ಹಾದಿ ಹಿಡಿಯುವುದುಂಟು. ಆದರೆ ಅಂಬಿ ಇಂದೂ ಬಾರದ ಕಾರಣ ಅದನ್ನು, ಬ್ಯಾಣದ ಸುತ್ತ ಮುತ್ತ ಬೆಳೆದ ಕುರುಚಲು ಕಾಡು ಹಾಗು ಮುಳುಗಡೆ ನೀರಿನ ಸಮೀಪ ಹುಡುಕುವ ಸಲುವಾಗಿ ಜನ ಗೊತ್ತು ಮಾಡಲು ಹೋಗಿದ್ದರೂ ಯಾರು ಸಮಯಕ್ಕೆ ಸಿಗಲಿಲ್ಲ. ಹತಾಶರಾಗಿ ವಾಪಾಸ್ ಮನೆಯ ಕಡೆ ಹೆಜ್ಜೆ ಹಾಕುವಾಗ ನಾವುಗಳು ಕಂಡು ಇತ್ತ ಧಾವಿಸಿದ್ದರು. ಇದು ಚಿಕ್ ಮಾವ ಹೇಳಿದ ಕಥೆಯ ಸಾರಾಂಶ. ಮಾವ ಹೇಳಿದ ಕಥೆಯನ್ನು ನಾನು ಮತ್ತು ನನ್ನ ತಂಗಿ ಕುತೂಹಲದಿಂದ ಕೇಳಿ ಒಬ್ಬರ ಮುಖವನ್ನೊಬ್ಬರು ನೋಡಿಕೊಂಡು ಮುಗುಳು ನಕ್ಕೆವು. ವಾತಾವರಣದ ಮೌನವನ್ನು ಭಂಗಗೊಳಿಸುತ್ತ ನಾ ಹೇಳಿದೆ, "ಮಾವ ಜನದ ಬಗ್ಗೆ ಚಿಂತೆ ಬೇಡ, ಒಂದಲ್ಲ ಎರಡಲ್ಲ ಮೂರ್ ಜನ ಇದಾರೆ! ಯಾವಾಗ ಹೋಗದು ಹೇಳಿ ಜನ ನಾ ಕರ್ಕೊಂಡ್ ಬರ್ತೀನಿ". ಅದಕ್ಕೆ ನನ್ನ ಮಾವ, "ಅದ್ಯಾವ್ ಜನ ಮಾರೈತಿ? ನಿಂಗೊತ್ತಿರೋರು." ಎಂದು ಆಶ್ಚರ್ಯದಿಂದ ಕೇಳಲು, "ನನ್ನ ನಂಬಿ ನೀವು! ನಾಳೆ ಊಟ ಆದ್ಮೇಲೆ ಬ್ಯಾಣದ್ ಶುರುನಲ್ಲಿರೋ ಆ ನೇರಳೆ ಮರದ್ ಹತ್ರ ಬನ್ನಿ ನಿಮ್ಗೆಲ್ಲಾ ಗೊತ್ತಾಗತ್ತೆ! ಅಂದೆ ಎತ್ಸಾಹದಿಂದ.
***
ಮಾರನೇ ದಿವಸ ಕಣ್ಣು ಬಿಡುತ್ತಲೇ ಏನೋ ಒಂದು ತರಹದ ಹುರುಪು ದೇಹದೊಳಗೆಲ್ಲಾ ಸಂಚಾರವಾದಂಗಿತ್ತು. ಬೆಳಗಿನ ಕೆಲಸಗಳನ್ನು ಮುಗಿಸಿಕೊಂಡು, ತಿಂಡಿ ತಿನ್ನುವ ಶಾಸ್ತ್ರವೂ ಪೂರೈಸಿ ನಾನು, ನನ್ನ ತಂಗಿಯೊಡನೆ ಆಚೆ ಮನೆ 'ಸುಬ್ಬು' ನ ನೋಡಿ ಬರಲು ಅವನ ಮನೆಯತ್ತ ಹೆಜ್ಜೆ ಹಾಕಿದೆವು. ಒಂದು ತೋಟ ದಾಟಿ ಗದ್ದೆ ಇಳಿದು ಕೆರೆಯ ಪಕ್ಕದಲ್ಲೇ ಹತ್ತಿಹೋದರೆ ಅಲ್ಲೇ ಸುಬ್ಬುವಿನ ಮನೆ!
ಸುಬ್ಬು; ಹೆಚ್ಚು ಕಡಿಮೆ ನಮ್ಮ ವಯೋಮಾನದವನೇ ಹಾಗೂ ನಮ್ಮ ದೂರದ ನೆಂಟರೂ ಹೌದು. ನಾವು ಸಮಗೊಡಿಗೆ ಬಂದಾಗಲೆಲ್ಲಾ ಅವನ ಜೊತೆಯೂ ಸಮಯ ಕಳೆಯುತ್ತಿದ್ದೆವು. ಅವನು ಅಲ್ಲಿಯವನೇ ಆದ್ದರಿಂದ, ಅಲ್ಲಿನ ಸುತ್ತ ಮುತ್ತಲಿನ ಪರಿಸರದ ಬಗ್ಗೆ ತಿಳಿದವನಾದ್ದರಿಂದ, ಅವನಿದ್ದರೆ ನಮಗೆ ಧೈರ್ಯಕ್ಕೆ ಒಂದು ಜನ ಇದ್ದಂತೆ. ಕಾಡು-ಗುಡ್ಡ ಸುತ್ತುವುದು, ಕಾಡಿನಲ್ಲಿ ಬಿಡುವ ಹಣ್ಣುಗಳನ್ನು ಹುಡುಕಿ ನಮಗೆ ತಿನ್ನಲು ತಂದು ಕೊಡುವುದು, ವಿಧವಿಧವಾದ ಹೂ ಬಳ್ಳಿಗಳನ್ನು ನಮಗೆ ಪರಿಚಯಿಸುವುದು ಸುಬ್ಬುಗೆ ಬಲು ನೆಚ್ಚಿನ ಕೆಲಸ ! ಸ್ವಲ್ಪ ಬಾಯಿ ಪಟಾಕಿ! ಆದರೆ ಹುಡುಗ ಒಳ್ಳೆಯವನೇ. ನಮ್ಮ ಕೆಲಸವನ್ನು ಅವನ ಬಳಿ ಸಲೀಸಾಗಿ ಮಾಡಿಸಿಕೊಳ್ಳಬಹುದಾಗಿತ್ತು. ಒಂದು ಮುಖ್ಯವಾದ ಕಾರ್ಯ ಸಾಧನೆಗಾಗಿ ಆದ ಸುಬ್ಬುವಿನ ಭೇಟಿ ಅತ್ಯಂತ ಮಹತ್ವದ್ದಾಗಿತ್ತು. ಮಾತುಕತೆ ಮುಗಿಸಿಕೊಂಡು ಮನೆಗೆ ಹಿಂತಿರುಗಿದ ನಮಗೆ ಆಗುತ್ತಿದ್ದ ಉತ್ಸಾಹ ಹೇಳತೀರದು.
Comments
Post a Comment