"ಕೊಪ್ಪರಿಗೆಯ ಬೆಲ್ಲ" (7) - ಹೌದು ಹುಲಿಯ!

ಹೌದು ಹುಲಿಯಾ!

      ಮಾರನೆಯ ದಿವಸ ಮಧ್ಯಾಹ್ನ ಊಟದ ಸಮಯ ... ಎರಡು ತುತ್ತು ಹೆಚ್ಚಿಗೆ ತಿಂದು ಎದ್ದಿದ್ದೆ. ನಾನು ನನ್ನ ತಂಗಿ ಸುಬ್ಬುವಿನ ಬರುವಿಕೆಯನ್ನೇ ನೀರೀಕ್ಷಿಸುತ್ತಾ ಪಾಗಾರದ ಮೇಲೆ ಕೂತಿದ್ದೆವು. ಮೂಲೆಯಲ್ಲಿ ಲಪ್ಪಿ ಎಲೆ ಅಡಿಕೆ ಜಗಿಯುತ್ತಾ ವಿಶ್ರಾಂತಿ ಪಡೆಯುತ್ತಿದ್ದಳು. ಎಂದಿನಂತೆ ನಾನು ಅವಳ ಬಳಿ ಕೂತು ಹರಟೆ ಹೊಡಿಯಲು ಸಮಯವಿರಲಿಲ್ಲ ಹಾಗು ಸಂಯಮವೂ ಇರಲಿಲ್ಲ. ಅಷ್ಟರಲ್ಲಿ ಹರಿ ಹರಿ ಎಂದು ಸುಬ್ಬು ಪ್ರತ್ಯಕ್ಷವಾದನು. ನಾವು ಸುಬ್ಬುವಿನ ಜೊತೆ, ನೇರಳೆ ಮನೆ ಬ್ಯಾಣದ ಮೇಲಿರುವ ಬಾಳೆ ಗುಡ್ಡಕ್ಕೆ ಹೋಗಿ ಸೂರ್ಯಾಸ್ತ ನೋಡಿ ಬರುತ್ತೇವೆ ಎಂದು ಹೇಳಿ ಹಿಂದಿನ ದಿವಸ  ತಾಯಿಯಿಂದ  ಒಪ್ಪಿಗೆ ಪಡೆದಿದ್ದೆವು. ನಾವು ಊನ್ಗೋಲು ತಳ್ಳಿ ಹೋಗುವುದನ್ನೇ ನೋಡುತ್ತಾ ನಿಂತ ಲಪ್ಪಿ ಗಟ್ಟಿಯಾಗಿ, "ಹಾಗೆ ಊನ್ಗೋಲು ಸರ್ಸಿ ಹೊಯ್ನಿ ಜಾನ್ವಾರ್ ನುಗ್ತಾವ್ ಕಡಿಗೆ" ಎಂದಳು.

      ಗೋದಿ ಬಣ್ಣ ಕೋಲು ಮೈ ೪೫  ಅಂಗುಲ, ಎಣ್ಣೆಗೆಂಪು ಬಣ್ಣ ಸಾಧಾರಣ ಮೈಕಟ್ಟು ೬೦ ಅಂಗುಲ, ಶ್ವೇತವರ್ಣ ಸಾದಾರಣ ಮೈಕಟ್ಟು ೫೪ ಅಂಗುಲ, ಪ್ರತಿಯೊಬ್ಬರ ಕೈಯಲ್ಲಿ ಅವರಷ್ಟೇ ಎತ್ತರದ ಒಣ ಕೋಲಿನ ಆಯುಧ ಕಾಲಿನಲ್ಲಿ ಹವಾಯ್ ಚಪ್ಪಲಿ, ಅದರಲ್ಲೊಂದು ಈಗಲೋ ಆಗಲೋ ಜೀವಬಿಡುವಂತಿತ್ತು, ದೊಗಲೆ ಶರ್ಟು ಅಲ್ಲಲ್ಲಿ ಗಾಳಿಯಾಡಲು ಸಣ್ಣ ತೂತು, ಮೊಣಕಾಲು ಉದ್ದ ದೊಗಲೆ ಚಡ್ಡಿ, ಬಾಯಿ ಖರ್ಚಿಗೆ ಜೇಬಿನಲ್ಲಿ ಸುಟ್ಟ ಗೀರು ಬೀಜ, ತಲೆಗೆ ಕ್ಯಾಪ್, ತೊಟ್ಟ ಬಟ್ಟೆ ನೋಡಿ ಗಂಡೋ! ಹೆಣ್ಣೋ! ಹೇಳುವುದು ಕಷ್ಟ ಸಾಧ್ಯವಾಗಿತ್ತು. ತುಂಬಿಸಿ ತರದೇ ಮರೆತ ನೀರಿನ ಬಾಟಲಿ, ಆ ಮೂವರ ನೆನಪಿನ ಶಕ್ತಿಯನ್ನು ಗೇಲಿಮಾಡುವಂತಿತ್ತಾದರೂ ಅವರಿಗೆ ತಮ್ಮ ಲಕ್ಷ್ಯದ ಕಡೆಗೆ ಇದ್ದ ಗಮನ ಬಾಯಾರಿಕೆ ಹಸಿವನ್ನು ಮರೆಸಿದಂತಿತ್ತು. ಆ ಮೂರು 'ದೊಡ್ಡ ಜನ' ಬ್ಯಾಣದ ಶುರುವಿನ ನೇರಳೆ ಮರದ ಬಳಿ ಬರಲು, ಚಿಕ್ ಮಾವ ಪೆಚ್ಚಾದ ಧ್ವನಿ ಇಂದ, " ಅಡ್ಡಿಲ್ಲ ಮಾರೈತಿ ಆಗಬೋದು! ಮೂವರು ದೊಡ್ಡ ಜನರೇ!" ಎಂದರು. "ಹಾ! ನಾವು ಮನೇಲಿ ಹೇಳಿ ಬಂದಿಲ್ಲ", ಎಂದ ಸುಬ್ಬು ಹಲ್ಲು ಕಿರಿಯುತ್ತ. "ನೀನು ದೊಡ್ಡ ಜನ ಅಲ್ವಾ ಮರೆಯ! ನಿನ್ನ ಹೇಳೋರು ಕೇಳೋರು ಇದ್ರಾ?" ಎಂದು ಮಾವ ಗೇಲಿ ಮಾಡಿದರು. ಮೂವರು ಹುಮ್ಮಸ್ಸಿನಿಂದ ಮಾವನ ಹಿಂದೆ ಹೆಜ್ಜೆ ಹಾಕಿದೆವು. 


      ಬ್ಯಾಣ ಇಳಿದು, ಬಾಳೆ ಗುಡ್ಡದ ಪಕ್ಕದ ಇಳಿಜಾರಿನಲ್ಲಿ ಕುರುಚಲು ಗಿಡ ಹಾಗೂ ಮುಳ್ಳು ಹಣ್ಣಿನ ಮರಗಳನ್ನು ದಾಟಿ ಸುಮಾರು ಮುಂದೆ ಹೋದೆವು, ಮುಂದೆ ಸಾಗುತ್ತಿದ್ದಂತೆ ನಮ್ಮ ಹಿಂದೆ ನಮ್ಮ ಕಾವಲಾಗಿ 'ಬಾಳೆ ಗುಡ್ಡ' ಧೈತ್ಯಕಾರವಾಗಿ ನಿಂತಂತೆ ತೋರಿತು. " ಅಗೋ! ಮುಂದೆ ದೂರದಲ್ಲಿ ಕಾಣುತ್ತಿರುವುದು ಕೊಡಚಾದ್ರಿಯ ತಪ್ಪುಲು" ಎಂದು ಮಾವ ಪರಿಚಯಿಸಿದರು. ಹಾಗಾದರೆ ಇಲ್ಲಿಂದ ಕೊಡಚಾದ್ರಿಗೆ ಕಾಲು ದಾರಿ ಇರಬಹುದು ಎಂದು ಮಾತನಾಡಿಕೊಳ್ಳುತ್ತಾ ಮುಂದೆ ಸಾಗಿದೆವು. 
      ಕಾಲು ದಾರಿಯು ಮಾಯವಾಗಿ ಕಾಡಿನ ದಾರಿ ಹಿಡಿದಾಗಿತ್ತು, ಬರಬರುತ್ತಾ ಗಿಡಗಂಟಿಗಳು ಹೋಗಿ ಮರ ಬಳ್ಳಿಗಳು ನಮ್ಮನ್ನು ಅವರಿಸ ತೊಡಗಿದವು ಹಾಗೂ ಇಳಿಜಾರು ನೆಲವಾದ್ದರಿಂದ ಅಷ್ಟು ಸರಾಗವಾಗಿ ಹೆಜ್ಜೆ ಹಾಕಲಾಗುತ್ತಿರಲಿಲ್ಲ. ಇನ್ನು ಸುಮಾರು ಅರ್ಧ ಕಿ ಮೀ ಕ್ರಮಿಸಿದ ಮೇಲೆ ಭೂಮಿಯಲ್ಲಿ ತೇವಾಂಶ ಜಾಸ್ತಿಯಾಗಿ ಕಾಲು ಸ್ವಲ್ಪ ಮಟ್ಟಿಗೆ  ಹುಗಿಯಲು ಪ್ರಾರಂಭಿಸಿತು. ಇದು ಮುಳುಗಡೆ ಪ್ರದೇಶವಾದ್ದರಿಂದ ಮಳೆಗಾಲದಲ್ಲಿ ನಾವು ನಡೆಯುತ್ತಿರುವ ಜಾಗದವರೆಗೂ ಶರಾವತಿ ನದಿಯ  ಹಿನ್ನೇರು ಬಂದಿರುತ್ತದೆ. ಈಗ ನೀರು ಇಳಿದಿದ್ದರೂ ಮಣ್ಣಿನ ತೇವಾಂಶ ಹೋಗಿರಲಿಲ್ಲ. ಈಗಾಗಲೇ ಬಹಳ ದೂರ ಕ್ರಮಿಸಿದ ನಾವುಗಳು ಎಲ್ಲೂ ಕೂತು ವಿಶ್ರಾಂತಿ ತೆಗೆದುಕೊಂಡಿರಲಿಲ್ಲ. ಕಾಡಿನ ಒಳಗೆ ಬೆಳಕಿನ ಅಭಾವದಿಂದ ಸಮಯದ ನಿಖರತೆ ತಿಳಿಯದಾಯಿತು. ಸುಸ್ತು ಎಂದರೆ ನಮ್ಮ ಪ್ರತಿಷ್ಠೆಗೆ ದಕ್ಕೆ ಬರುತ್ತದೆ ಎಂದು ಸುಮ್ಮನಿದ್ದರೂ ಕಾಲು ಮಾತನಾಡುತ್ತಿದ್ದುದರಿಂದ ಹೆಜ್ಜೆ ನಿದಾನವಾಗುತ್ತಾ ಬಂದಿತ್ತು.  ಅದನ್ನು ಗಮನಿಸಿದ ಮಾವ, "ಮಕ್ಕಳೇ, ಇಳಿಜಾರಿನಲ್ಲಿ ಜಾರಿದರೆ ಆಯಾಸವಾಗಲ್ಲ ಅಕ್ಕ ಪಕ್ಕ ಬೆಳೆದ ಗಿಡಗಳ ಸಹಾಯದಿಂದ ಜಾರಿಬಿಡಿ" ಎಂದರು. ಅದರಂತೆಯೇ ನಾವು ಮೂವರು ಮೊದಲು ತಾನಾಗಿಯೇ ಜಾರುತ್ತಿದ್ದ ಹವಾಯ್ ಚಪ್ಪಲಿ ಯನ್ನು ಜಾರಿಸಿ ನಂತರ ಬರಿ ಕಾಲಿನಲ್ಲಿ ನೆಲದ ಇಳಿಜಾರಿನ ಮೇಲೆ ಭಯ ದಿಂದಲೇ ಜಾರಿ ಕೆಳಗಿಳಿದೆವು. ನಾವು ಹಿನ್ನೆರಿಗೆ ಬಹಳ ಸಮೀಪದಲ್ಲಿದ್ದೆವು. ನೀರನ್ನು ನೋಡಿ ಬಾಯಾರಿಕೆಯ ನೆನಪಾದರೂ ನೀರಿನ ಬಳಿ ಹೋಗಲು ಧೈರ್ಯ ಸಾಲಲಿಲ್ಲ. ಕಾಲು ವಿಪರೀತ ಹುಗಿಯುವ ಜಾಗವೆಂದು ಅರಿವಿತ್ತು. 

       ಸೂರ್ಯಾಸ್ತದ ಸಮಯವೆಂದು ಹೇಳಬಹುದು, ನಾವು ಅತ್ತ ಇತ್ತ ನೋಡುತ್ತಾ ಅಲ್ಲೇ ಕೂತೆವು. ಚಿಕ್ ಮಾವ , "ನೀವು ಮೂವರು ಇಲ್ಲೇ ಇರಿ ನಾನು ಸ್ವಲ್ಪ ಮುಂದೆ ಹೋಗಿ ನೋಡಿ ಬರ್ತೀನಿ ಮತ್ತೆ ವಾಪಾಸ್ ಹೋಗುವ" ಎಂದರು. ನಡೆಯುವ ತ್ರಾಣ ಇಲ್ಲದ ನಮಗೆ ಅದೇ ಸರಿ ಎನಿಸಿತು. ಮಾವ ಅತ್ತ ಹೋಗುತ್ತಲೇ ನಾವು ಏನೋ ನೆನಪಾಗಿ ಜೇಬಿಗೆ ಕೈ ಹಾಕಿ ಗೇರು ಬೀಜ ತಿನ್ನುತ್ತಾ ಕಾಡಿನ ನೀರವ ಮೌನ ಹಾಗೂ ಕ್ರಿಮಿ ಕೀಟಗಳ ವಿಚಿತ್ರ ಶಬ್ದಗಳನ್ನು ಕೇಳುತ್ತಾ ಪೆಚ್ಚಾಗಿ ಕೂತಿದ್ದೆವು. ಮರುಕ್ಷಣವೇ ಮೂವರು ಗಾಬರಿಯಿಂದ ಎದ್ದು ನಿಂತು ಒಬ್ಬರ ಮುಖವನ್ನೊಬ್ಬರು ನೋಡತೊಡಗಿದೆವು. ನಾವು ಏನನ್ನು ನೋಡಿದ್ದೇವೆ ಎಂಬುದರ ಅರಿವು ನಮಗಿತ್ತು. ಉಸಿರು ನಿಂತಂತಾಗಿ ಮಾತು ಬರದೇ ಹೋಯಿತು. ಓಡಿ ಹೋಗುವ ಮನಸಾದರೂ ಓಡಲಾಗಲಿಲ್ಲ! ಒಬ್ಬರ ಕೈಯನ್ನೊಬ್ಬರು ಹಿಡಿದು ಮಾವನ ಬರಿವಿಕೆಯನ್ನೇ ಕಾಯುತ್ತಿದ್ದ ನಮಗೆ ಒಂದೊಂದು ಕ್ಷಣವೂ ಯುಗವಾಗಿತ್ತು. 


Comments

  1. Very nice and short story I read the whole thing.
    - Adithya BH

    ReplyDelete
  2. Magazine ge article kodu tumba sundara hagu kutuhalkariyagide
    Regular column baribahudu
    Nanu bhagya doddamma

    ReplyDelete

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "