"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!
ಫಲ ಸಂತರ್ಪಣೆ!
ಸುಬ್ಬುವಿನ ಮನೆಯ ಚಿಟ್ಟೆಯ ಮೇಲೆ ಕುಳಿತು ನಾವು ಮೂವರು, ಅಷ್ಟದಿಕ್ಕುಗಳಲ್ಲಿ ದೊರೆಯುವ ಹಣ್ಣುಗಳ ಪಟ್ಟಿ ಮಾಡಿ, ಯಾವ ದಿಕ್ಕಿನಿಂದ ಶುರು ಮಾಡಬೇಕೆಂದು 'ಪ್ಲಾನ್ ಆಫ್ ಆಕ್ಷನ್' ಸಿದ್ಧಪಡಿಸಿದೆವು. ಅದರ ಪ್ರಕಾರ ಮೊದಲು ಸ್ವಲ್ಪ 'ದುರ್ಗಮ ಪ್ರದೇಶದಲ್ಲಿದ್ದ ಪನ್ನೇರಳೆ' ಹಣ್ಣಿನ ಮರದಿಂದ ಪ್ರಾರಂಭಿಸಿ, 'ತೋಟದ ಒಳಗಿದ್ದ ಅಂಬರಲೇ ಹಣ್ಣಿನ ಮರ', ನಂತರ 'ಬ್ಯಾಣದ ಬಾಳೆ ಗುಡ್ಡಕ್ಕೆ ತಾಗಿಗೊಂಡಿದ್ದ ನೇರಳೆ ಮರ' ಹಾಗು ಕೊನೆಯದಾಗಿ 'ಅಣ್ಣೀಭಟ್ರು ಮನೆ ಗದ್ದೆಯಲ್ಲಿದ್ದ ಪೇರಳೆ ಮರ' ಅದರಲ್ಲೂ ಸಾರದ ಬಳಿ ಇರುವ 'ಚಂದ್ರ ಪೇರಳೆ' ಹಣ್ಣಿನ ಭೇಟೆ ಹಣ್ಣುಗಳ ಪಟ್ಟಿಯಲ್ಲಿ ಪ್ರಮುಖವಾಗಿತ್ತು.
ನಾನು ಸುಬ್ಬು ಸೇರಿ ಹೆಗಲಿಗೆ ದೊಟಿಯನ್ನು ಏರಿಸಿಕೊಂಡೆವು, ತಂಗಿ ಹಣ್ಣುಗಳನ್ನು ತುಂಬಿಸಲು ತೋಟದಲ್ಲಿ ಬಿದ್ದಿರುವ ಅಡಿಕೆ ಹಾಳೆಯನ್ನು ಆರಿಸಿಕೊಂಡಳು. ಮೂವರು ಪನ್ನೇರಳೆ ಮರದ ಕಡೆ ಹೆಜ್ಜೆ ಹಾಕಿದೆವು. ಸುಬ್ಬು ಮನೆ ತೋಟದ ಕೊನೆಯ ಮುರುಕಲು ಸಾರ ದಾಟಿ ಇಕ್ಕಟ್ಟಿನ ಪ್ರದೇಶದಲ್ಲಿ ಏರಿಯ ತುತ್ತ ತುದಿಯಲ್ಲಿರುವ ಮರವೇ ಪನ್ನೇರಳೆ ಹಣ್ಣಿನದು.
ಸಾರವನ್ನು ದಾಟುವಾಗಲೇ ಅರ್ಧ ಜೀವ ಹೋಗಿರುತ್ತದೆ, ಇನ್ನು ಹಣ್ಣಿನ ಆಸೆಗಾಗಿ ಜಾಸ್ತಿ ಬಗ್ಗಿದರೆ ಮಗಚಿ ಆಳವಾದ ಹಳ್ಳಕ್ಕೆ ಬೀಳುವುದು ಖಂಡಿತ. ಸುತ್ತಲೂ ಮರ, ಸೂರ್ಯನ ಬೆಳಕು ಅಷ್ಟಾಗಿ ಬೀಳದ ಜಾಗ, ಕತ್ತಲೆಯಲ್ಲಿ ಕಪ್ಪಾಗಿ ತೋರುತ್ತಿರುವ ಹಳ್ಳದ ನಿಂತ ನೀರು. ಇಂತಹ ಜಾಗದಲ್ಲಿ ಅಂತಹ ಸುಹಾಸನೆ ಯುಕ್ತವಾದ ಪನ್ನೇರಳೆ ಮರವಾದರೂ ಹೇಗೆ ಹುಟ್ಟಿತೋ?! ಹೇಳಿ ಕೇಳಿ ಇಂತಹ ಜಾಗಗಳಲ್ಲಿ ಹಾವುಗಳಿರುವುದು ಸಾಮಾನ್ಯ. ಕಳೆದ ವಾರ ತಾನೇ ತೋಟದ ಕೆಲಸಕ್ಕೆ ಬಂದಿದ್ದ 'ಭೋಜನ ಮಗ' ಇಲ್ಲಿ 'ಕಾಳಿಂಗ ಸರ್ಪವನ್ನು' ನೋಡಿದ್ದೇನೆ ಎಂದು ಗುಲ್ಲು ಎಬ್ಬಿಸಿದ್ದನಂತೆ.
ಅವನು ಏನನ್ನು ನೋಡಿ ಕಾಳಿಂಗ ಸರ್ಪ ಎಂದು ತಿಳಿದನೋ ಆ ದೇವರೇ ಬಲ್ಲ! ಆದರೂ ಹೇಳಿ ಕೇಳಿ ಚಳಿಗಾಲ, ಹಾವುಗಳು ನಿರ್ಭೀತಿಯೆಂದ ಸಂಚರಿಸುವ ಸಮಯ ನಾವು ಹೆಚ್ಚು ಜಾಗರೂಕರಾಗಿರಬೇಕಾಗುತ್ತದೆ ಎಂದು ಸಣ್ಣ ಸಣ್ಣ ಸದ್ದನ್ನೂ ತೀರಾ ಗಮನವಿಟ್ಟು ಕೇಳುತ್ತಿದ್ದೆವು. ಅಲ್ಲಿ ಮೂವರಿಗೂ ನಿಲ್ಲಲು ಸ್ಥಳಾವಕಾಶವಿಲ್ಲ. ಒಬ್ಬರು ಸಾರದ ಮೇಲೆಯೇ ನಿಲ್ಲಬೇಕಾಗುತ್ತದೆ. ನನ್ನ ತಂಗಿಯನ್ನು ಪುಸಲಾಯಿಸಿ ಸಾರದ ಮೇಲೆ ನಿಲ್ಲಿಸಿದ್ದೆವು. ಸುಬ್ಬು ಮರದ ಬುಡಕ್ಕೆ ಹೋಗಿ ನಿಂತು ದೋಟಿಯನ್ನು ಮೇಲೆ ಮಡಿದ, ನಾನು ಅಲ್ಲೇ ಪಕ್ಕದಲ್ಲಿ ನಿಂತು ಹಣ್ಣು ಇರುವ ಸ್ಥಳದ ಗುರುತು ಹೇಳುತ್ತಿದ್ದೆ.
ದೋಟಿಯ ಏಟಿಗೆ ಹಣ್ಣು ಬಿದ್ದರೆ, ಬೀಳುವುದು ಸೀದಾ ಹಳ್ಳಕ್ಕೆ. ಆದ್ದರಿಂದ ನಿಧಾನವಾಗಿ ಹೆರೆಯನ್ನು ಬಗ್ಗಿಸಿ ಒಂದೇ ನನ್ನ ಬಳಿ ಅಥವಾ ನನ್ನ ತಂಗಿಯ ಬಳಿ ತಳ್ಳಬೇಕಾಗಿ ಬಂತು. ಹಾಗೂ ಹೀಗೂ ಹರಸಾಹಸ ಪಟ್ಟು ಏಳೆಂಟು ಹಣ್ಣುಗಳನ್ನು ವಶಪಡಿಸಿಕೊಂಡೆವು. ಅದರಲ್ಲೊಂದು ಕೈ ತಪ್ಪಿ ಹಳ್ಳ ಹಿಡಿದಿತ್ತು!
ಮುಂದೆ ನಾವು ಲಗ್ಗೆ ಇಟ್ಟದ್ದು ಅಂಬರಲೇ ಹಣ್ಣಿನ ಮರಕ್ಕೆ! ಅದು ನಮ್ಮ ಮಾವನ ತೋಟದೊಳಗೆ ಇದೆ. ನೋಡಿದಾಗ ಕಂಬಳಿ ಹುಳದ ನೆನಪಾದರೂ ಹಣ್ಣಿನ ರುಚಿಯೇ ಅಮೋಘ! ಅದರಲ್ಲಿ ಕಪ್ಪು ಹಣ್ಣು ಸಿಹಿ ಆದರೆ ಕೆಂಪು ಹಣ್ಣು ಹುಳಿ ಹುಚ್ಚ! ಮರದ ತುಂಬಾ ಬಿಟ್ಟ ಹಣ್ಣನ್ನು ನೋಡಿ ಎರಡು ಕೈ ಇಂದ ಬಾಚಿ ಬಾಚಿ ತಿಂದೆವು. ಇದನ್ನು ಅಲ್ಲಿಯೇ ಕಿತ್ತು ತಿನ್ನಬೇಕು. ಮನೆಗೆ ತೆಗೆದುಕೊಂಡು ಹೋಗುವುದರೊಳಗೆ ಪಚ್ಚಿಯಾಗಿ ಹೋಗಿರುತ್ತದೆ ಅಷ್ಟು ಮೃದುವಾದ ಹಣ್ಣು.
ಹೊಟ್ಟೆ ಅಳತೆ ಮೀರಿ ಸುಬ್ಬು ಹಣ್ಣನ್ನು ತಿಂದಿದ್ದ. ತೋಟದಿಂದ ಆಚೆ ಬಂದು ಬ್ಯಾಣದ ಹಾದಿ ಹಿಡಿದೆವು. ಬಿಸಿಲು ಚುರುಕಾಗಿ ತಲೆಗೆ ಮುಟ್ಟುವಂತಿತ್ತು. ನೇರಳೆ ಮರ ಇರುವುದು ಬ್ಯಾಣದ ಬಾಳೆ ಗುಡ್ಡಕ್ಕೆ ತಾಗಿಕೊಂಡಂತೆ. ಬಿಸಿಲಿನಲ್ಲಿ ಅಲ್ಲಿಯವರೆಗೂ ನಡೆಯುವುದೇ ಕಷ್ಟವಾಯಿತು. ಅಷ್ಟರಲ್ಲಿ ಅಂಬರಲೇ ಹಣ್ಣಿನ ಪ್ರಭಾವಕ್ಕೆ ಸೂರ್ಯನ ಕೃಪೆಗೆ ಪಿತ್ತ ಕೆದರಿ ಸುಬ್ಬು ವಾಂತಿ ಮಾಡಲಾರಂಭಿಸಿದ...ಬ್ಯಾಣದ ಸುತ್ತಲೂ ಒಂದೂ ಮರವಿಲ್ಲ. ದೂರದ ಆ ನೇರಳೆ ಮರವೇ ಗತಿ ಎಂದು ನಡೆದೆವು. ನೇರಳೆ ಮರದ ವರೆಗೂ ಕೆಂಪು ಬಣ್ಣದ ವಾಂತಿ ಮಾಡುತ್ತಾ ಹೋಗುತ್ತಿದ್ದ ಸುಬ್ಬುವಿನ ಪರಿಸ್ಥಿತಿ ಅಯ್ಯೋ ಅನಿಸುವಂತಿತ್ತಾದರೂ, ನಮಗೂ ತಲೆ ತಿರುಗಿ ವಾಕರಿಕೆ ಬರಲು ಶುರುವಾಗಿತ್ತು.
ಮಠ ಮಠ ಮಧ್ಯಾಹ್ನ ಊಟದ ಹೊತ್ತಾದರೂ ನಾವು ಮನೆಯ ಕಡೆ ಹೋಗಿರಲಿಲ್ಲ 'ಉತ್ತಿಷ್ಠತಾ ಜಾಗ್ರತ' ಎಂಬುದನ್ನು ಸ್ವಲ್ಪ ಗಂಭೀರವಾಗಿಯೇ ಪರಿಗಣಿಸಿದ್ದೆವು. ಆದರೂ ಮನೆಯವರು ಎಲ್ಲಿ ದೊಣ್ಣೆ ಹಿಡಿದುಕೊಂಡು ಬರುತ್ತಾರೋ ಎಂಬ ದಿಗಿಲೂ ಇತ್ತು. ವಾಂತಿ ಮಾಡಿದ ಮೇಲೆ ಸುಬ್ಬು ಕೋತಿಯ ರೀತಿ ಆಡಲು ಶುರು ಮಾಡಿದ್ದ ಎಂದರೆ ತಪ್ಪಾಗಲಾರದು!. ನೋಡು ನೋಡುತ್ತಿದ್ದಂತೆ ಮರವನ್ನೇರಿ ಊರಿಗೆಲ್ಲ ಸಂತರ್ಪಣೆ ಆಗುವಷ್ಟು ನೇರಳೆ ಹಣ್ಣನ್ನು ಉದುರಿಸಿದ್ದ. ನಾವಿಬ್ಬರು ಅದನ್ನು ಒಂದೂ ತಿನ್ನದೇ ಒಟ್ಟು ಮಾಡಿಕೊಂಡೆವು. ಅಲ್ಲಿಗೆ ನಮ್ಮ ಪಟ್ಟಿ ಇಂದ ಒಂದೊಂದೇ ಹಣ್ಣುಗಳು ನಮ್ಮ ಕೈ ಸೇರತೊಡಗಿದ್ದವು. ಇನ್ನೇನು ನಮ್ಮಅಂದಿನ ಕಾರ್ಯಕ್ರಮದ ಕೊನೆಯ ಹಂತವಾಗಿ ಪೇರಳೆ ಹಣ್ಣಿನ ಮರದ ಕಡೆಗೆ ಹೋಗಬೇಕು ಅಷ್ಟರಲ್ಲಿ ಸುಬ್ಬುವಿನ ತಂದೆ ಕೈಯಲ್ಲಿ ಮುಳ್ಳಿನ ಕೋಲು ಹಿಡಿದು ನಮ್ಮ ಬಳಿ ಬರುತ್ತಿದ್ದುದ ನೋಡಿ ಮೂವರು ಅಲ್ಲಿಂದ ಕಾಲ್ಕಿತ್ತೆವು!
Photos are excellent adarallu fruits on the hubaale super.rare collection. Great
ReplyDeleteThank you :)
Delete