"ಕೊಪ್ಪರಿಗೆಯ ಬೆಲ್ಲ" (2) - ಪ್ರಯಾಣ ಪರಿಚಯ





ಪ್ರಯಾಣ ಪರಿಚಯ

 

   ಏಳನೇ ತರಗತಿಯ ವಿದ್ಯಾರ್ಥಿಯಾದ ನಾನು ವರ್ಷವಿಡೀ ಕಾಯುವುದು ದಸರೆ, ಕ್ರಿಸ್ಮಸ್ ಹಾಗೂ ಬೇಸಿಗೆ ರಜಕ್ಕೆ. ಓದಿನಲ್ಲಿ ಜಾಣೆಯಾದರೂ ನನ್ನ ಆಸಕ್ತಿ ಕ್ರಿಯಾತ್ಮಕ ಕೈ ಕೆಲಸಗಳಲ್ಲಿ. ವಸ್ತುವಿನ ಮೇಲೆ ವ್ಯಾಮೋಹಕ್ಕಿಂತ ಬೇರೆ ಬೇರೆ ವಿಧವಾದ ಅನುಭವಗಳನ್ನು ಪಡೆಯುವುದರಲ್ಲೇ ನನಗೆ ಒಲವು ಹೆಚ್ಚು. ಇದೇ ಒಲವು ಹುಚ್ಚಾಗಿ ಜಾತಕ ಪಕ್ಷಿಯು ಮೊದಲ ಮಳೆಗೆ ಕಾಯುವಂತೆ ನಾನು ನನ್ನ ಅಜ್ಜಿ ಮನೆಗೆ ಹೋಗಲು ಕಾಯುತ್ತಿರುತ್ತಿದ್ದೆ. ಆ ನೆಲದ ಮಣ್ಣಿನ ಘಮ, ಗೊಬ್ಬರ ಗುಂಡಿಯ ವಾಸನೆ, ಮಾಗಿದ ಹಲಸಿನ ಪರಿಮಳವು ನನ್ನ ಮೂಗಿನಲ್ಲಿಯೇ ಇದೆ. ಬ್ಯಾಣದ ಮೇಲಿನ ಸುಳಿಗಾಳಿ ಹಾಗೂ ಕೆರೆಯ ಮೇಲಿನ ತಿಳಿಗಾಳಿಯ ಅನುಭೂತಿಯನ್ನು ಯೋಚಿಸಿದಾಗಲೆಲ್ಲಾ ನನ್ನ ಮುಂಗುರುಳು ಸರಿಯುತ್ತದೆ.

    ಇನ್ನೆರಡು ದಿನಗಳಲ್ಲಿ ಕ್ರಿಸ್ಮಸ್ ರಜೆ ಪ್ರಾರಂಭವಾಗುತ್ತದೆ. ಅಂದು ಶಾಲೆಯಿಂದ ಬಂದ ನಾನು ಸುಧಾರಿಸಿಕೊಂಡು ಬಟ್ಟೆಬರೆ ಜೋಡಿಸಿಕೊಳ್ಳಲು ಪ್ರಾರಂಭಿಸಿದೆ. ನಾ ಹೊಗಲಿರುವ ಹಳ್ಳಿಯಲ್ಲಿ ಸುತ್ತಮುತ್ತ ೬ ಕಿ.ಮೀ. ವರೆಗೂ ಒಂದೂ ಅಂಗಡಿ ಇಲ್ಲ. ಗಾಡಿ ರಸ್ತೆಗೆ ಹೋಗಬೇಕೆಂದರೆ ತೋಟದಾಟಿ, ಗದ್ದೆ ಬದಿಯಲ್ಲಿ ನಡೆದು, ಅಡಿಕೆ ಮರದ ಸಾರ ದಾಟಿ, ಕಚ್ಚಾರಸ್ತೆಯಲ್ಲಿ ೨೦೦ ಮೀ. ಹೋಗಬೇಕು ಅಷ್ಟೆಲ್ಲಾ ಸಾಹಸ ಮಾಡುವುದಕ್ಕಿಂತ, ಕುರುಕಲು ತಿಂಡಿಗಳನ್ನು ಮೋದಲೇಹೊತ್ತು ಹೋಗುವ ಕೆಲಸಕ್ಕೆ ಪ್ರಥಮ ಆಧ್ಯತೆ ನೀಡುತ್ತಿದ್ದೆ. ಮೊಬೈಲ್ ಫೊನ್ ತೆಗೆದುಕೊಂಡು ಹೋಗುವ ಪ್ರಮೇಯವೇ ಇಲ್ಲ. ಪ್ರತೀ ಬಾರಿ ನೆಟ್‌ವರ್ಕ್ಗಾಗಿ ಬಾಳೆಗುಡ್ಡವನ್ನು ಹತ್ತುವ ವೈಪರೀತ್ಯಕ್ಕೆ ಯಾರು ಹೋದಾರು? ಮೊಬೈಲ್ ಚಾರ್ಜ್ಗೆ ಕರೆಂಟ್ ಇರುತ್ತದೆಯೋ  ಕಡಿತವಾಗುತ್ತದೆಯೋ? ಅದ್ಯಾವ ಕಂಬದ ಮೇಲೆ ಯಾವ ಮರ ಬಿದ್ದಿತೋ ತಿಳಿಯಲು ಹಲವು ದಿನಗಳೇ ಬೇಕಾಗುತ್ತದೆ.


 ಅಲ್ಲಿ ದೊರೆಯುವ ಏಕಮಾತ್ರ ಮನೋರಂಜನೆ ಪ್ರಾಣಿ ಪಕ್ಷಿಗಳನ್ನು ನೋಡುವುದು, ಗುಡ್ಡಕ್ಕೆ ಹೋಗಿ ಕೊಟ್ಟಿಗೆಗೆ ಹಾಸಲು ದರಗು ತರುವುದು, ಮುಂಜಾನೆ ತೋಟಕ್ಕೆ ಹೋಗಿ ಅಲ್ಲಿ ಬಿದ್ದಿರುವ ಹುಂಬಾಳೆಯನ್ನು ಆರಿಸುವುದು, ದೇವರ ಪೂಜೆಗೆ ವಿಧವಿಧವಾದ ಹೂವನ್ನು ಕಿತ್ತು ತರುವುದು, ನಾಗನ ಬನದ ಬಳಿಯ ನೆಲದ ಮೇಲೆ ಬಿದ್ದಿರುವ ರಂಜದ ಹೂವನ್ನು ಆರಿಸಿ ಪೂಜೆಗೆ ಮಾಲೆ ಮಾಡಿ ಯಾರ ಮಾಲೆ ಉದ್ದವಾಗಿದೆ? ಎಂದು ಪೈಪೋಟಿ ನಡೆಸುವುದು, ಬಚ್ಚಲ ಮನೆಯ ಒಲೆಯ ಬಳಿ ಕೂತು ಬಾಳೆಹಣ್ಣು ಸುಡುವುದು, ಹಿತ್ತಲ ಗಿಡದಲ್ಲಿ ಬಿಟ್ಟ ಮೆಣಸಿನ ಕಾಯಿ ಕೊಯ್ಯುವುದು, ಹೊತ್ತು ಹೊತ್ತಿಗೆ ಮೇಯುವುದು, ಮಧ್ಯಾಹ್ನದ ಊಟ ಹೊಟ್ಟೆ ಬಿರಿಯುವಷ್ಟು ಉಂಡು, ಹಿರಿಯರು ಹಾಕುವ ಎಲೆ ಅಡಿಕೆಯ ಕಂಡು ತಾನೂ ಎಲೆಯ ಮಧ್ಯೆ ಸಕ್ಕರೆ ಹಾಕಿಕೊಂಡು ಮೆಲ್ಲುವುದು. ನಂತರ ಜಗಲಿಯ ಮೇಲೆ ಸಿಕ್ಕಸಿಕ್ಕ ಜಾಗದಲ್ಲಿ ಉರುಳುವುದು, ಸಂಜೆಯವೇಳೆ ಕಾಫಿ ಹೀರುತ್ತಾ ಹರಟುತ್ತಾ ನಗುತ್ತಾ ಕಾಲತಳ್ಳುವುದು, ಹಾಗೆಯೇ ಗೇರು ಮರದ ಕಡೆ ತೆರಳಿ ಮರದ ಕೆಳಗೆ ಬಿದ್ದ ಗೋಡಂಬಿಯನ್ನು ಹೆಕ್ಕಿ ತಂದು ಅಂಗಳದಲ್ಲಿ ಗುಡ್ಡೆ ಹಾಕುವುದು ಹಾಗೂ ಇರುಳಿನಲ್ಲಿ ನೆಲದ ಮೇಲೆ ಕಂಬಳಿ ಹಾಸಿ ಸುತ್ತ ಕೂತು ರಮ್ಮಿ ಆಡುವಾಗ ಬರುವ ಮಜಾ ಹೇಳತೀರದು. ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ವರೆಗೆ ಎಲ್ಲರೂ ಆಟದಲ್ಲಿ ನಿಪುಣರೇ. ಈ ಅನುಭವಗಳು ದುಡ್ಡು ಕೊಟ್ಟರೆ ಸಿಗುವಂತಹುದಲ್ಲ ಅನುಭವಿಸಿಯೇ ತೀರಬೇಕು.


Comments

  1. Superb.. It's like reliving those moments... Good job 😍👍

    ReplyDelete
  2. Nanna balyada nenapugalu yedurige bandantaytu 😊😊
    Its so great...!

    ReplyDelete
  3. Glad u liked it n could revive ur childhood fun:)

    ReplyDelete

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "