"ಕೊಪ್ಪರಿಗೆಯ ಬೆಲ್ಲ" (3) - ಭಟ್ಟರಗಾಡಿ ಎಕ್ಸ್ಪ್ರೆಸ್!


ಭಟ್ಟರಗಾಡಿ ಎಕ್ಸ್ಪ್ರೆಸ್!

 

   ಊರಿಗೆ ಹೊರಡುವ ದಿನ ಬಂದೇ ಬಿಟ್ಟಿತು. ಬಸ್ಸಿನ ಸೌಕರ್ಯ ಸ್ವಲ್ಪ ಕಡಿಮೆ ಇದ್ದುದ್ದರಿಂದ ಮುಂಜಾನೆ ೬:೩೦ ರ ಮೊದಲ ಬಸ್ಸಿಗೆ ಹೊರಡುವುದು ಒಳಿತೆಂದು ಭಟ್ಟರಗಾಡಿ ಹೆಚ್.ಟಿ.ಕೊ. ಲಿಮಿಟೆಡ್‌ಗಾಗಿ ಬಸ್ ನಿಲ್ಡಾಣದಲ್ಲಿ ಕಾದು ನಿಂತೆವು. ಈ ಗಾಡಿಯ ವಿಶೇಷವೆಂದರೆ ಇದು ನಾನ್ ಸ್ಟಾಪ್ ಎಕ್ಸ್ಪ್ರೆಸ್ ಅಂತ ಬರೆದರೂ ನಾನಾ ಸ್ಟಾಪಿನ ಗಾಡಿ. ಕೈ ಮಾಡಿದವರು, ದುರುಗುಟ್ಟಿ ನೋಡಿದವರು ಎಲ್ಲರ ಮುಂದೆಯೂ ಬಸ್ಸನ್ನು ನಿಲ್ಲಿಸುವ ಭಟ್ಟರು ಹಲ್ಲುಕಿರಿಯುತ್ತಾ ಹೊಯ್! ಎಲ್ಲಿಗೆ? ಎಂದು ಕೇಳಿ ಕಂಡಕ್ಟರ್ ಮಾಡುವ ಕೆಲಸವನ್ನು ತಾವೇ ಮಾಡುತ್ತಿದ್ದರು. ಇದು ಖಾಲಿ ಜನರನ್ನು ಕೊಂಡೊಯ್ಯುವ ಗಾಡಿ ಆಗದೆ, ಹಾಲು, ಹೂವು, ಹಣ್ಣು, ಹೊಗೆಸೊಪ್ಪು, ಪೇಪರ್ ಎಲ್ಲಾ ತರಹದ ಪಾರ್ಸಲ್ ಸಾಗಿಸುವ ವಾಹನವೂ ಆಗಿತ್ತು. ಆ ಬಸ್ಸಿನ ಡ್ರೈವರ್ ಹಾಗೂ ಕಂಡಕ್ಟರ್‌ನ ಜೋಡಿ ಒಳ್ಳೆ ಕಿಲಾಡಿ ಜೋಡಿ. ದೂರದ ಆಯಾಸದ ಪ್ರಯಾಣವನ್ನು ಆನಂದಮಯವಾಗಿ ಮಾಡುವ ಅವರ ವಾಕ್‌ಚಾತುರ್ಯ, ತಮಾಷೆ, ಹಾವಭಾವ ಶ್ಲಾಘನೀಯ. ಶಾಲೆ ಮಕ್ಕಳನ್ನು ಮುಂದಕ್ಕೆ ಹತ್ತಿಸಿಕೊಂಡು ಅವರನ್ನು ರೇಗಿಸುವುದು, ಹುಡುಗರಿಗೆ ಗೇಲಿ ಮಾಡುವುದು. ಒಂದನೆಯ ಕ್ಲಾಸ್ ಟೀಚರ್‌ಗೆ ಒಂದು ತಲೆಯಾದರೆ, ಹತ್ತನೆಯ ಕ್ಲಾಸ್ ಟೀಚರ್‌ಗೆ ಎಷ್ಟು ತಲೆ?” ಎಂದು ಕಿರಿಕ್ ಪ್ರಶ್ನೆಗಳನ್ನು ಕೇಳುತ್ತಾ, ಮಕ್ಕಳ ಮುಖ ಭಾವನೆಯನ್ನೂ, ಅವರ ಉತ್ತರವನ್ನೂ ಕೇಳಿ ಅಪಹಾಸ್ಯ ಮಾಡುವುದು, ಮಜಾ ತೆಗೆದುಕೊಳ್ಳುವುದೇ ಅವರ ದಿನಚರಿ ಯಾದರೆ, ಅದನ್ನು ನೋಡುತ್ತಾ ಪ್ರಯಾಣಿಕರು ತಮ್ಮ ಬೇಸರವನ್ನು ಕಳೆಯುತ್ತಿದ್ದರು. ಸುಮಾರು ಮೂರು ತಾಸಿನ ಪ್ರಯಾಣವನ್ನು ನಾಲ್ಕು ತಾಸು ಮಾಡಿ, ಇನ್ನು ಈ ಬಸ್ಸು ಹತ್ತಬಾರದಪ್ಪಾ ಎಂದೆನಿಸುವಷ್ಟು ಜಿಗುಪ್ಸೆ ಬಂದದ್ದೂ ಉಂಟು.

    ಬೆಳ್ಳಂಬೆಳಗ್ಗೆ ತಿನ್ನಲು ಏನೂ ಸೇರದೆ ಖಾಲಿ ಹೊಟ್ಟೆಯಲ್ಲಿ ಹೊರಟ ನಮಗೆ ಆಗಲೆ ಯಾವಾಗ ಊರು ತಲುಪುವೆವೋ ಎಂದು ಯೋಚನೆ ಹತ್ತಿತು. ಅಷ್ಟರಲ್ಲಿ ಪೋಮ್! ಪೋಮ್! ಎಂದು ಸದ್ದು ಮಾಡುತ್ತಾ ಸ್ಟ್ಯಾಂಡಿನ ಒಳಗೆ ಬಂದ ಬಸ್ಸು ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ನಾನು ತಡಮಾಡದೆ ಕೈಯಲ್ಲಿ ಕರ್ಚಿಫ್ ಹಿಡಿದು ಪಿ.ಟಿ. ಉಷಾಳಂತೆ ಬಸ್ಸಿನ ಹಿಂದೆ ಓಡಿ ಹೋಗಿ, ಅದು ನಿಂತ ಕೂಡಲೆ ಹತ್ತಿ ಮುಂದಿನ ಮೂರು ಸೀಟು ಹಿಡಿದು ಕೂತು ಇನ್ನೆರಡಕ್ಕೆ ಕರ್ಚಿಫ್ ಹಾಕಿದೆ. ನನ್ನ ತಾಯಿ ಮತ್ತು ತಂಗಿ ನಿಧಾನವಾಗಿ ಬ್ಯಾಗ್ ತೆಗೆದುಕೊಂಡು ಬಂದು ನಾ ಕಾಯ್ದಿರಿಸಿದ ಜಾಗದಲ್ಲಿ ಕೂತರು.

    ಎಲ್.ಇ.ಡಿ. ದೀಪದಿಂದ ಮಿಣ ಮಿಣ ಮಿನುಗುತ್ತಿರುವ ಶ್ರೀ ಕೊಲ್ಲೂರು ಮೂಕಾಂಬಿಕೆಯ ಫೋಟೊ, ಅದಕ್ಕೊಂದು ಮಲ್ಲಿಗೆ ಹೂವಿನ ಹಾರ, ಸ್ಟೇರಿಂಗ್‌ನ ಪಕ್ಕದಲ್ಲಿರುವ ತೂತಿಗೆ ಸೇರಿಸಿದ ಊದುಬತ್ತಿಯ ಧೂಪ ಇಡೀ ಬಸ್ಸನ್ನು ಹಬ್ಬಿತ್ತು. ಫೋಟೊಗೆ ಹಾಕಿದ ಮಲ್ಲಿಗೆ ಹಾಗೂ ಹೆಂಗಸರ ಮುಡಿಯ ಮಲ್ಲಿಗೆ ಹಾಗೂ ಸಂಪಿಗೆ ಹೂವಿನ ಸುವಾಸನೆಯು ಹೆಚ್ಚಾಗಿ ಆಗಲೇ ಸಣ್ಣದಾಗಿ ತಲೆನೋವು ಪ್ರಾರಂಭವಾದಂತಿತ್ತು. ೬:೪೦ ಆದರೂ ಬಸ್ಸು ಹೊರಡುವ ಸೂಚನೆ ಕಾಣಲಿಲ್ಲ. ಸೀಟು ಭರ್ತಿ ಆಗಿ ನಾಲ್ಕು ಜನ ನಿಲ್ಲುವವರೆಗೂ ಬಸ್ಸು ಹೊರಡುವುದಿಲ್ಲ ಎಂಬುದು ಅಘೋಷಿತ ನಿಯಮವಾಗಿತ್ತು. ಹಾಗೂ ಹೀಗೂ ಬಸ್ಸು ೬:೪೫ ಕ್ಕೆ ಹೊರಡಲು ನಮ್ಮ ಬ್ಯಾಗಿನಿಂದ ತಿಂಡಿಯ ಪ್ಯಾಕೆಟ್‌ಗಳು ಹೊರಬರಲು ಪ್ರಾರಂಭಿಸಿದವು. ಖಾಲಿ ಹೊಟ್ಟೆಗೆ ಹಾಳೂ ಮೂಳೂ ತಿನ್ನಬೇಡಿ ಎಂಬ ನನ್ನ ತಾಯಿಯ ಎಚ್ಚರದ ಮಾತನ್ನು ಗಾಳಿಗೆ ತೂರಿ, ಇದು ನನ್ನ ಪಾಲು, ಅದು ನಿನ್ನ ಪಾಲು ಎಂದು ನಾವಿಬ್ಬರು ತಿಂಡಿ ಹಂಚಿಕೆಯಲ್ಲಿ ತೊಡಗಿದೆವು. ಮಾರುದ್ದಕ್ಕೂ ನಿಲ್ಲಿಸಿಕೊಂಡು ಹೋಗುತ್ತಿದ್ದ ಬಸ್ಸನ್ನು ಕಂಡು ನನ್ನ  ತಾಯಿ ಇನ್ನು ಊಟಕ್ಕೆ ಹೋಗುವೆಯೋ?” ಎಂದು ಗೊಣಗಿದರು. 


ಬಸ್ಸು ಹೊಸನಗರ ತಲುಪುವುದನ್ನೇ ಕಾಯುತ್ತಿದ್ದ ನಾವು ಕಿಟಕಿಯಿಂದ ಆಚೆ ಇಣುಕುತ್ತಾ ಹಾಲ್ ಐಸ್ ಮಾರುವವನನ್ನು ಹುಡುಕುತ್ತಿದ್ದೆವು. ಹೊಸನಗರ ಬಸ್ಟ್ಯಾಂಡಿನಲ್ಲಿ ೫ ರೂ ಕೊಟ್ಟು ಹಾಲ್ ಐಸ್ ಹೀರುತ್ತಾ, ಕೈಯಲ್ಲೆಲ್ಲಾ ಸೋರಿಸಿಕೊಂಡು ತಿಂದರೇನೆ ನಮಗೆ ನೆಮ್ಮದಿ. ಆದರೆ ನನ್ನ ತಾಯಿ ಮುಖ ಸಿಂಡರಿಸಿಕೊAಡು ಯಾವ ನೀರಲ್ಲಿ ಮಾಡಿದ್ದೋ? ಏನೋ? ಇದೆಲ್ಲಾ ತಿನ್ನಬಾರದು. ಇವನೋ ಮಕ್ಕಳು ಇರುವಲ್ಲಿಯೇ ಘಂಟೆ ಬಾರಿಸಿಕೊಂಡು ಬರುತ್ತಾನೆ! ಎಂದು ರೇಗಿದರು. ಅದನ್ನು ಲೆಕ್ಕಿಸದೇ ನಾವು ಹಾಲ್ ಐಸಿನ ರುಚಿಯಲ್ಲಿ ತೇಲಿದ್ದೆವು.


 ಬಸ್ಸು ಹೊಸನಗರದ ಬಸ್ಟ್ಯಾಂಡ್ ಬಿಡುತ್ತಿದ್ದಂತೆ ಭಟ್ಟರು, ಹೊಟ್ಟೆ ತೊಳೆಸುತ್ತಿದ್ದರೆ, ವಾಂತಿ ಬರುವಂತಿರುವವರೆಲ್ಲರೂ ಹಿಂದಿನ ಸೀಟುಗಳಲ್ಲಿ ಕುಳಿತುಕೊಳ್ಳಿ, ಮುಂದಿನ ಸೀಟಿನವರೆಲ್ಲಾ ಕಿಟಕಿಗಳನ್ನು ಹಾಕಿಕೊಳ್ಳಿ ಎಂದು ಎಚ್ಚರಿಸಿದರು. ಸಾಮಾನ್ಯವಾಗಿ ಈ ಮಾರ್ಗದಲ್ಲಿ ಪ್ರಯಾಣಿಸುವ ನಮಗೆಲ್ಲಾ ಇದು ಸರ್ವೇಸಾಮಾನ್ಯವಾಗಿ ಬಿಟ್ಟಿತ್ತು. ಆದ್ದರಿಂದಲೇ ಮೊದಲು ಓಡಿ ಬಂದು ಮುಂದಿನ ಸೀಟುಗಳನ್ನು ಹಿಡಿದದ್ದು.


Comments

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" - ಪ್ರಾಸ್ತವಿಕೆ

We Create Awesome : "VAULT!"