"ಕೊಪ್ಪರಿಗೆಯ ಬೆಲ್ಲ" (10) - ಉತ್ತಿಷ್ಠತಾ ಜಾಗ್ರತಾ!
ಉತ್ತಿಷ್ಠತಾ ಜಾಗ್ರತಾ!
ತೆಂಗಿನ ಗರಿಯ ಪರಕೆಯ ಪರ ಪರ ಸದ್ದಿನಿಂದಲೇ ನನಗೆ ಎಚ್ಚರವಾದದ್ದು. ನಾ ಮಲಗಿರುವ ಹಾಸಿಗೆಯೊಂದು ನನ್ನ ಹೊತ್ತು ಆ ಜಗುಲಿಯ ಮೇಲೆ ಅನಾಥವಾಗಿ ಬಿದ್ದಿತ್ತು.
ಕಿಟಕಿಯಿಂದ ನುಸುಳುತ್ತಿದ್ದ ಬಿಸಿಲಿನ ಕೊಲು, ರೆಡಾಕ್ಸಿಡ್ ನೆಲದ ಮೇಲೆ ಕೂತಿರುವ ಧೂಳಿನ ಕಣಗಳನ್ನೂ ಹಾಗು ಅದರೊಂದಿಗೆ ಗುದ್ದಾಟ ನಡೆಸುತ್ತಿರುವ ನೊಣಗಳನ್ನೂ ಎದ್ದು ತೋರಿಸುತ್ತಿತ್ತು. ಹಿತ್ತಲಲ್ಲಿ ಯಾರೋ ನಮ್ಮ ಮುಳುಗಡೆ ಪರಿಕ್ರಮಣದ ಕಥೆಯನ್ನು ಸವಿಸ್ತಾರವಾಗಿ ಹೇಳುತ್ತಿದ್ದುದ ಕೇಳಿ, ಹಿಂದಿನ ರಾತ್ರಿಯ ಕನಸಿನಲ್ಲಿ ಕಾಡಿದ ಹುಲಿಯ ಚಿತ್ರಣ ಕಣ್ಣ ಮುಂದೆ ಮಿಂಚಿ ಮರೆಯಾಯಿತು. ನಾನು ರಸವತ್ತಾಗಿ ಹೇಳಬೇಕೆಂದುಕೊಂಡ ಕಥೆಯನ್ನು ನನಗೂ ಮುಂಚೆ ನನ್ನ ತಂಗಿಯೇ ಹೇಳಿಬಿಟ್ಟಳಲ್ಲಾ! ಎಂದು ನೀರಾಶೆಯಾದರೂ 'ನನ್ನ ಲಪ್ಪಿ' ಇದ್ದಾಳಲ್ಲ ಅವಳಿಗೆ ಹೇಳಿದರಾಯಿತು ಎಂದು ಸಮಾಧಾನಗೊಂಡೆ. ಎದ್ದ ಕೂಡಲೇ ಎಷ್ಟೆಲ್ಲಾ ಆಲೋಚನೆಗಳು! ಇದರ ಮಧ್ಯೆ ನನ್ನ ದೇಹದ ಕೂಗು ನನಗೆ ಕೇಳಿಸದೇ ಹೋಯಿತೇ?...
ಪರಕೆ ಹಿಡಿದು ನನ್ನ ಅಮ್ಮ ದೇವರ ಒಳದಿಂದ ಬಂದು, "ನೀನು ಹಾಸಿಗೆ ಮಾಡಿಸಿದರೆ ಈ ಒಳ ಗುಡಿಸಬಹುದೆಂದರು".ನನ್ನ ಆಗಿನ ಪರಿಸ್ಥಿತಿಯಲ್ಲಿ ನನ್ನ ಮೆದುಳಿಗೆ ಎಚ್ಚರವಾಗಿತ್ತೇ ಹೊರತು ದೇಹಕ್ಕಲ್ಲ! ಮೇಲೇಳಲು ಕಷ್ಟವಾಯಿತಾದರೂ ಎದ್ದು ನಿಂತೆ. ನನ್ನ ತಂಗಿಗೆ ಹಾಸಿಗೆ ಮಾಡಿಸಲು ಹೇಳಿ ಮುಖ ತೊಳೆಯಲು ಬಚ್ಚಲ ಕಡೆಗೆ ಮುಖ ಮಾಡಿದೆ. ಮೇಲ್ನೋಟಕ್ಕೆ ಜ್ವರ ಇಲ್ಲದಿದ್ದರೂ ಒಳಒಳಗೆ ಮೈ ಬಿಸಿಯಾಗುತ್ತಿತ್ತು. ಕಾಲು ಎಳೆದುಕೊಂಡೆ ಓಡಾಡಬೇಕಾದ ಪರಿಸ್ಥಿತಿ. ಹಿಂದಿನ ದಿನದ ಹುಮ್ಮಸ್ಸು ಕರಗಿ ನೀರಾಗಿ ಹೋಗಿತ್ತು.
ಅಂಗಳದಲ್ಲಿ ಕಾಫಿ ಹೀರುತ್ತಾ ಕುಳಿತಿದ್ದಾಗ ಬೀಸುತ್ತಿದ್ದ ಅಡಿಕೆ ತೋಟದ ತಂಪು ಗಾಳಿ ಕಂಬಳಿ ಹೊದ್ದು ಮಲಗು ಎಂದು ಪುಸಲಾಯಿಸುವಂತಿತ್ತು.
ಬೆಳಗ್ಗೆ ಬೆಳಗ್ಗೆ ಇತ್ತ ಸುಬ್ಬುವಿನ ಸವಾರಿ ಬಂದಂತೆ ತೋರಿ ನನ್ನ ತಂಗಿಯನ್ನು ಕರೆದೆ. ಆಕೆಯ ಪರಿಸ್ಥಿತಿ ನನ್ನಷ್ಟು ಹದಗೆಟ್ಟಿಲ್ಲವಾದರೂ ಅವಳಿಗೂ ಕಾಲು ನೋವು ಹಾಗು ಎಣಗು ಕಚ್ಚಿದ ಗಾಯಗಳಾಗಿದ್ದವು. ನಾನು ಈ ಮೊದಲೇ ಹೇಳಿದಂತೆ ಸುಬ್ಬುವಿನಿಂದ ನಮಗೆ ಅಲ್ಲಿ ಪೇರಳೆ, ನೇರಳೆ, ಅಂಬರಲೆ, ಪನ್ನೇರಳೆ ಹೀಗೆ ಇತ್ಯಾದಿ ಹಣ್ಣುಗಳು ಸವಿಯಲು ಸಿಗುತ್ತಿದ್ದವು. ಆ ಹಣ್ಣುಗಳೇ ನಮಗೆ 'ಎಗ್ಝೋಟಿಕ್ ಫ್ರೂಟ್!' ಆತ ತನ್ನ ಜೊತೆ ಬಿಸಿ ಬಿಸಿ ಸುದ್ದಿಯನ್ನೇ ತಂದಿದ್ದ. "ಕ್ರಿಸ್ಮಸ್ ರಜೆಯಾದ್ದರಿಂದ ನಮ್ಮ ಮಾವನ ಮನೆಯಿಂದ ಐದು ಫರ್ಲಾಂಗ್ ದೂರದ್ಲಲಿರುವ ಭೀಮ ಭಟ್ಟರ ಮನೆಗೆ ಅವರ ಮೊಮ್ಮಕ್ಕಳು ಇಂದು ಸಂಜೆ ಆಗಮಿಸಲಿದ್ದು, ಇನ್ನು ತಡ ಮಾಡಿದರೆ ನಾವು ಕಿತ್ತು ತರಬೇಕೆಂದುಕೊಂಡಿದ್ದ ಪೇರಳೆ, ನೇರಳೆ, ಅಂಬರಲೆ, ಪನ್ನೇರಳೆ ಹಣ್ಣುಗಳಿಂದ ಕೈ ಚೆಲ್ಲಿಕೊಳ್ಳಬೇಕಾಗುತ್ತದೆ. ಅವರ ಮೊದಲೇ ಜನ ಜಾಸ್ತಿ, ಬಂದು ಬ್ಯಾಗ್ ಇಡುತ್ತಿದಂತೆಯೇ ಹಣ್ಣಿನ ಮರಗಳಿಗೆ ಲಗ್ಗೆ ಇಡುತ್ತಾರೆ" ಎಂಬ ಸ್ಪೋಟಕ ಮಾಹಿತಿ ಬಿಚ್ಚಿಟ್ಟನು. ನಮಗೂ ಹಾಗೂ ಭೀಮ ಭಟ್ಟರ ಮೊಮ್ಮಕ್ಕಳಿಗೂ ಹಣ್ಣುಗಳ ವಿಷಯದಲ್ಲಿ ನಡೆಯುವ ಪೈಪೋಟಿ "ಆ ಸಮುದ್ರ ಮಂಥನದಲ್ಲಿ ಅಮೃತಕ್ಕಾಗಿ ದೇವ ದಾನವರ ನಡುವೆ ನಡೆದ ಪೈಪೋಟಿಗೆ ಸಮನಾದುದೆಂದರೆ ಉತ್ಪ್ರೇಕ್ಷೆಯಾಗುವುದಿಲ್ಲ". ಇಲ್ಲಿ ಯಾರು ದೇವರು? ಯಾರು ದಾನವರು? ಎಂಬುದು ಪ್ರಶ್ನೆಯಲ್ಲವಾದ್ದರಿಂದ ನಾನು ಉತ್ತರಿಸಲೂ ಹೋಗುವುದಿಲ್ಲ! ಸಮಗೊಡಿನಲ್ಲಿ ಬೆಳದ ಹಣ್ಣುಗಳ ಮೇಲೆ ವರ್ಷಕ್ಕೆ ಮೂರು ಬಾರಿ ನಮ್ಮ ಪಾರುಪತ್ಯವನ್ನು ಸ್ಥಾಪಿಸುವುದು ನಮ್ಮ ಆ ಜನ್ಮ ಸಿದ್ದ ಹಕ್ಕು ಎಂದೇ ತಿಳಿದಿದ್ದೆವು. ಅದರಲ್ಲೂ ಆ ಭೀಮ ಭಟ್ಟರ ಮೊಮ್ಮಕ್ಕಳಿಗೆ 'ಪನ್ನೇರಳೆ ಹಣ್ಣಿನ ಬದಲು ಚಳ್ಳೆ ಹಣ್ಣು' ತಿನ್ನಿಸುವುದರಲ್ಲಿ ಸಿಗುವ ಮಜಾ ಇನ್ಯಾವುದರಲ್ಲಿ ಸಿಕ್ಕೀತು? ಅವರು ಹತ್ತು ಮಂದಿಯಾದರೇನು? ನಾವು ಹುಲಿಯ ಬಾಯಿ ಇಂದ ತಪ್ಪಿಸಿಕೊಂಡು ಬಂದ "ಪುಟಾಣಿ ಏಜೆಂಟ್ ಒನ್ ಟೂ ಥ್ರೀ! ಅಲ್ಲವೇ?!" ಇಷ್ಟು ಸಾಕಿತ್ತು ನಮಗೆ ನಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು.
ಆದರೆ ವಾಸ್ತವಕ್ಕೂ ವಿಚಾರ ಕಲ್ಪನೆಗೂ ಇಲ್ಲಿ ಹೊಂದಾಣಿಕೆ ಗೋಚರವಾಗಲಿಲ್ಲ! ಕಾರಣ, ನೆನ್ನೆಯ ನಮ್ಮ ಪರಾಕ್ರಮವನ್ನು ಪ್ರಾಮಾಣಿಸುತ್ತಿದ್ದ ಇಂದಿನ ಸುಸ್ತು ಹಾಗೂ ಜ್ವರ. ನಡೆಯುವ ನಿಟ್ಟಿಲ್ಲದ ನಮ್ಮಿಂದ ಯಾವ ಹೋರಾಟ ಗೆಲ್ಲಲು ಸಾಧ್ಯ? ಹಾಗೆಂದಮಾತ್ರಕ್ಕೆ ಹಣ್ಣುಗಳ ಆಸೆ ಬಿಡಲಾಗುವುದೇ? ಮಾರನೆಯ ದಿನ ಬರುತ್ತಿದ್ದ ನನ್ನ 'ಕಸಿನ್ಸ್' ನ ಮುಂದೆ ತರಹೇವಾರಿ ಹಣ್ಣುಗಳನ್ನಿಟ್ಟು 'ಸರ್ಪ್ರೈಸ್' ಕೊಡಬೇಕೆಂದುಕೊಂಡಿದ್ದ ನಮಗೆ ಹೀಗಾಗಬಾರದಿತ್ತು!.
"ತಿಂಡಿಗ್ ಬರ್ರೋ ಹೊತ್ತಾಯಿತು!" ಎಂಬ ಕೂಗು ಅದೆಷ್ಟು ಸತಿ ಬಂದಿತ್ತೋ ಕೇಳಿಸಲಿಲ್ಲ. "ಅಮ್ಮ ಆಗ್ಲಿಂದ ಕರಿತ್ರ್ ನೋಡಿ, ಹೋಗಿ ತಿಂಡಿ ಮುಗ್ಸಿ ಕಡಿಗ್ ಮಾತಾಡ್ತಾ ಕೂರಿ" ಎಂದಳು ಲಪ್ಪಿ, ಬಳೆಗೆ ಸಿಗಿಸಿದ ಸೇಫ್ಟಿ ಪಿನ್ ಇಂದ ತನ್ನ ಹಲ್ಲಿನ ಮಧ್ಯ ಸಿಲುಕಿರುವ ಅಡಿಕೆ ಚೂರನ್ನು ತೆಗೆಯುತ್ತಾ!
ಹಿತ್ತಲಲ್ಲಿ ಅರಿಶಿನ ಕುಟ್ಟುತ್ತಾ ಲಪ್ಪಿ ತಿಂಡಿಗೆ ಕುಳಿತ ಮೂವರನ್ನು ಉದ್ದೇಶಿಸಿ, " ಅಣ್ಣೀ ಭಟ್ರು ಮನೆ ಗದ್ದೆ ಬದಿ ಬೇಕಾದಷ್ಟ್ ಪೇರಳೆ ಹಣ್ಣು ಇದ್ವು! ಕುಯ್ಯೋರಿಲ್ದೆ ಮಂಗ, ಗಿಳಿ ಗೆ ಲಾಯ್ಕ್ ಆಯ್ತ್! ಅಲ್ಲ ನೀವ್ ಎಂತಕ್ ಆಕಡೆ ಹೋಗ್ಲಾ? ಅದ್ಬಿಟ್ಟು ಮುಳ್ಗಡೆ ಸುತ್ತಾಕ್ ಹೋಗಿದ್ ಸರಿ" ಎಂದು ಉರಿಯುತ್ತಿದ್ದ ಬೆಂಕಿಗೆ ತುಪ್ಪ ಸುರಿದಳು.
'ಮನಸ್ಸಿದ್ದರೆ ಮಾರ್ಗ', ದೇಹದ ಬಲಕ್ಕಿಂತ ನಮ್ಮ ಮನೋಬಲವೇ ದೊಡ್ಡದು ಎಂದು ತಿಂಡಿ ಮುಗಿಸಿ, ಅಂಗಳದ ತಿಳಿ ಬಿಸಿಲಿನಲ್ಲಿ ಕೂತು ಲಪ್ಪಿಯ ಕೈಯಲ್ಲಿ ನಮ್ಮ ಕೈ ಕಾಲುಗಳಿಗೆ ಚೆನ್ನಾಗಿ ಎಣ್ಣೆ ಹಚ್ಚಿಸಿಕೊಂಡು ಕೊತ ಕೊತ ಕುದಿಯುವ ಹಂಡೆ ನೀರಿನಲ್ಲಿ ಸ್ನಾನ ಮಾಡಿ ಮುಗಿಸಿದೆವು. ಹಂಡೆ ನೀರಿನ ಸ್ನಾನದಿಂದ ಹೋದ ಚೇತನವು ಮತ್ತೆ ಬಂದಂತಾಗಿ, "ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬ ಸ್ವಾಮಿ ವಿವೇಕಾನಂದರ ವಾಣಿಯಂತೆ ನಮ್ಮ ಇಂದಿನ ಇಷ್ಟಾರ್ಥ ಸಿದ್ದಿಗಾಗಿ ಸುಬ್ಬುವಿನ ಮನೆಯ ಕಡೆ ಹೆಜ್ಜೆ ಹಾಕಲು, ಜ್ವರ ಹಾಗು ಹುಲಿಯ ಹೆಜ್ಜೆಯ ನೆನಪು ನಮ್ಮ ಚಿತ್ತದಿಂದ ಹಾರಿ ಹೋಗಿತ್ತು.
ಇಷ್ಟೆಲ್ಲಾ ಯೋಚನೆ ಗಳು ಇಷ್ಟು ದಿನ ಎಲ್ಲಿ ಬಚ್ಚಿಟ್ಟುಕೊಂಡಿದ್ದೀ ಆಗಬಹುದು ಹುಡುಗಿ
ReplyDeleteNot hiding n all!! I had it from day one, now that I choose to pen down... I'm reachable to many :)
DeleteThanks for the appreciation 🙏