"ಕೊಪ್ಪರಿಗೆಯ ಬೆಲ್ಲ" (12) - ಗುಡ್ಡಕ್ಕೆ ಬೆಂಕಿ ಇಟ್ಟನಾ?...ಆ ಕೊಳ್ಳಿ ದೆವ್ವ!
ಗುಡ್ಡಕ್ಕೆ ಬೆಂಕಿ ಇಟ್ಟನಾ?....ಆ ಕೊಳ್ಳಿ ದೆವ್ವ!
ಅಂದು ನಾವಿಬ್ಬರು ರಾಜರೋಷವಾಗಿಯೇ ಮನೆ ಸೇರಿದ್ದೆವು. ಮನೆಯವರೆಲ್ಲಾ ಮಾರನೆಯ ದಿನದ ತಿಂಡಿಗೆ 'ಹಲಸಿನ ಎಲೆಯ ಕೊಟ್ಟೆ' ಕಟ್ಟುವುದರಲ್ಲಿ ವ್ಯಸ್ಥವಾಗಿದ್ದರು. ಅವರಿಗೂ, ನಮಗೆ ಬುದ್ದಿ ಹೇಳಿ ಹೇಳಿ ಸಾಕಾಗಿತ್ತು!. "ಇವರು ನಮ್ಮ ಕೈ ಸಿಗದಿದ್ದರೂ ಪರವಾಗಿಲ್ಲ ನಮಗೆ ತೊಂದೆರೆಯೊಂದಾಗದಿದ್ದರೆ ಸಾಕು" ಎನ್ನುವ ಮನಸ್ಥಿತಿ ಬಹುಷಃ. ನಾವು ಅಡುಗೆಮನೆಯಲ್ಲಿ ನಮ್ಮ ಪಾಡಿಗೆ ಬಾಳೆ ಎಲೆಯನ್ನು ಹಾಕಿಕೊಂಡು ಸದ್ದಿಲ್ಲದೆ ಊಟ ಮುಗಿಸಿದೆವು. ಆದರೆ ಪಾಪ ಸುಬ್ಬು, ಮುಳ್ಳಿನ ಕೋಲಿಗೆ ಹೆದರಿ ಅದೆಲ್ಲಿ ಅಡಗಿ ಕುಳಿತಿದ್ದಾನೋ ಆ ದೇವರೇ ಬಲ್ಲ! ಊಟ ಮುಗಿಸಿ ನಾವು ಬೆವರು ಸುರಿಸಿ ಸಂಪಾದಿಸಿದ ಆ ದಿನದ ಸಂಪತ್ತನ್ನು ಎಲ್ಲರಿಗೂ ತೋರಿಸಿ ಹೆಮ್ಮೆ ಪಟ್ಟೆವು. ನಮ್ಮ ಪುಣ್ಯ ಯಾರು ಏನು ಅನ್ನಲಿಲ್ಲ.
ಮಧ್ಯಾಹ್ನ ಕಳೆದು ಸಂಜೆಯಾಗುತ್ತಾ ಬಂದಿತ್ತು ಬಿಸಿಲು ಪಕ್ಕಕ್ಕೆ ಸರಿದು ತಣ್ಣನೆಯ ಗಾಳಿಯ ಸುಳಿದಾಟ ಆರಂಭವಾಯಿತು. ನಮಗೋ, ಉಳಿದುಹೋದ ಬಹುಮುಖ್ಯವಾದ ಒಂದು ಕೆಲಸದ ಬಗ್ಗೆಯೇ ಆಲೋಚನೆ! ಇನ್ನೇನು 'ಕೊಲ್ಲೂರು ಗಾಡಿಗೆ' ಭೀಮ ಭಟ್ಟರ ಮೊಮ್ಮಕ್ಕಳು ಬಂದುಬಿಡುತ್ತಾರೆ. 'ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವಲ್ಲ' ಎಂದು ಯೋಚನೆಗೀಡಾದೆವು. ಅಷ್ಟರಲ್ಲಿ ಗೊಬ್ಬರ ಗುಂಡಿಯ ಪಕ್ಕದಿಂದ ವಿಚಿತ್ರ ಧ್ವನಿ ಕೇಳಲಾರಂಭಿಸಿ ಆ ಕಡೆ ತಿರುಗಿ ನೋಡಲು ಸುಬ್ಬು ತನ್ನ ವಿರಾಟ ದರ್ಶನವನ್ನು ನೀಡುತ್ತಾ ನಿಂತಿದ್ದ. ಕಣ್ಣ ಸನ್ನೆಯ ಮೂಲಕ ಗೇರು ಮರದ ಬಳಿ ಬರುವಂತೆ ಸೂಚಿಸಿದ. ನಾವಿಬ್ಬರು, "ಚಿಕ್ ಮಾವನ ಮನೆಗೆ ಹೋಗಿ ಬರುತ್ತೇವೆ, ಕತ್ತಲಾದರೆ ಮಾವನಿಗೆ ಬಿಟ್ಟು ಹೋಗಲು ಹೇಳುತ್ತೇವೆ" ಎಂದು ಸಬೂಬು ಹೇಳಿ ಹೊರಟೆವು. ಹುಂಬಾಳೆ ಕೊಂಡು ಹೋದರೆ ಅನುಮಾನ ಬರುತ್ತದೆ ಎಂದು, ಹೋಗುವಾಗ ಭೀಮ ಭಟ್ಟರ ತೋಟದ ಹುಂಬಾಳೆ ಹಾಗು ದೋಟಿಯನ್ನೇ ಎತ್ತಿ ಮತ್ತೆ 'ಯಥಾ ಸ್ಥಾನ ಮದ್ವಾಸ್ಥಾನ' ಮಾಡಿದರೆ ಆಯಿತು ಎಂದುಕೊಂಡೆವು. ನಾವು ಮಕ್ಕಳಲ್ಲವೇ? ನಮಗೇನು ತಿಳಿಯುತ್ತದೆ? ಯಾರದು ಮುಟ್ಟಬೇಕು ಇನ್ಯಾರದು ಮುಟ್ಟಬಾರದೆಂದು! ನಮಗೆಲ್ಲಾ ಒಂದೇ ...
ಗೇರು ಮರದ ಬಳಿ ಬರಲು ಸುತ್ತ ನೋಡಿದರೂ ಸುಬ್ಬು ಕಾಣಿಸಲಿಲ್ಲ ಆದರೆ ಆ ವಿಚಿತ್ರ ಧ್ವನಿ ಮತ್ತೆ ಕೇಳಲು ತಲೆ ಎತ್ತಿ ಮರದ ಮೇಲೆ ನೋಡಿದರೆ ಕೋತಿ ಮರ ಹತ್ತಿ ಕೂತಿತ್ತು!. ಇದಕ್ಕೇ ಹೇಳುವುದೇನೊ ಮುಳ್ಳಿನ ಕೋಲಿನ ರುಚಿ ಎಂದು! "ಇಲ್ಲಿ ಯಾರು ಇಲ್ಲ ಮಾರಾಯ ಕೆಳಗೆ ಇಳಿ" ಎಂದು ಹೇಳಿದಮೇಲೆಯೇ ಅವನು ಇಳಿದದ್ದು. ನಮ್ಮಿಬ್ಬರ ಕಿವಿಯಲ್ಲಿ ಗುಟ್ಟಾಗಿ ಒಂದು ಸೀಕ್ರೆಟ್ ಪ್ಲಾನ್ ಹೇಳಿದ. ಅದರಂತೆ ಎಲ್ಲಾ ವ್ಯವಸ್ಥೆಯನ್ನು ಈಗಾಗಲೇ ಮಾಡಿಕೊಂಡು ಬಂದಿದ್ದ. ಪ್ಲಾನ್ ಏನೋ ಚೆನ್ನಾಗಿದೆ! ಆದರೆ "ಏನೋ ಮಾಡಲು ಹೋಗಿ ಇನ್ ಏನೋ ಆಗಿಬಿಟ್ಟರೆ" ಎಂಬ ಅಂಜಿಕೆ ಕಾಡಿತು. ಆದರೂ ಹುಡುಕು ಬುದ್ದಿಯಲ್ಲವೇ? ಮಜಾ ಮಾಡುವ! ಹೇಗೂ ಚಳಿಗಾಲ, ಎಂದು ಪೊದೆಗಳಲ್ಲಿ ಅಡಗಿ ಕೊಂಡೆ ಮುಂದೆ ಮುಂದೆ ಹೋದೆವು.
ಭೀಮಾ ಭಟ್ಟರ ತೋಟದ ತುದಿಗೆ ಅಂಟಿಕೊಂಡಿರುವ 'ನಲ್ಲಿ' ಗುಡ್ಡದ ಬದಿಯ ಕಾಲು ದಾರಿಯನ್ನು ಹಿಡಿದರೆ ಅಣ್ಣೀ ಭಟ್ರ ಗದ್ದೆ ಹಾಗು ಅದರ ಆರಂಭದಲ್ಲಿಯೇ ಪೇರಳೆ ಮರಗಳ ರಾಶಿ ಸಿಗುತ್ತದೆ. ತೋಟದಲ್ಲಿ ದೋಟಿಯನ್ನು ಹುಡುಕಿ ಸಮಯ ಹಾಳು ಮಾಡಬಾರದೆಂದು ಅಲ್ಲೇ ಬಿದ್ದುರುವ ಹುಂಬಾಳೆಯನ್ನು ಆರಿಸಿಕೊಂಡು ತೋಟ ದಾಟಿ 'ನಲ್ಲಿ' ಗುಡ್ಡಕ್ಕೆ ಬರಲು, ಪೂರ್ವ ನಿಯೋಜಿತ ಪ್ಲಾನ್ ನ ಪ್ರಕಾರ; 'ಒಣ ಹುಲ್ಲು ಹಾಗು ದರಗಿನ ರಾಶಿ ಮಾಡಿ ಗುಂಪು ಗುಂಪಾಗಿ ಆ ಮೊದಲೇ ಸುಬ್ಬು ಹಾಕಿದ್ದನು. ಜೇಬಿನಿಂದ ಬೆಂಕಿ ಪೊಟ್ಟಣವನ್ನು ತೆಗೆದು ಕಡ್ಡಿ ಗೀರಿಯೇ ಬಿಟ್ಟನು! ಒಣ ಎಲೆಗೆ ಬೆಂಕಿ ಹೊತ್ತಿದಂತಾಗಿ ಬೀಸುವ ಗಾಳಿಗೆ ಅದು ಎಷ್ಟು ಬೇಗ ಹೊತ್ತಿತೋ ಅಷ್ಟೇ ಬೇಗ ಆರಿಯೂ ಹೋಯಿತು. ಕೊನೆಯದಾಗಿ ಕಡ್ಡಿ ಗೀರಿ ಒಣ ಹುಲ್ಲಿಗೆ ಹೊತ್ತಿಸಿ ದರಗಿನ ಗುಂಪಿಗೆ ಇಟ್ಟನು. ಈ ಬಾರಿ ಬೆಂಕಿ ಚೆನ್ನಾಗಿಯೇ ಹಿಡಿದಿತ್ತು. ಅದು ಹೊತ್ತಿದ ಕೂಡಲೇ ನಾವು ಕಾಲು ದಾರಿ ಹಿಡಿದು 'ನಲ್ಲಿ' ಗುಡ್ಡ ದಾಟಿ ಗದ್ದೆ ಹತ್ತಿದೆವು. ಪೇರಳೆ ಹಣ್ಣುಗಳನ್ನು ಕುಯ್ದು ಹುಂಬಾಳೆಗೆ ತುಂಬಿಸಿ ಕ್ಷಣಮಾತ್ರದಲ್ಲೆಯೇ ಮರಗಳನ್ನು ಬರಿದು ಮಾಡಿ ಸಾರದ ಬಳಿ ಇರುವ 'ಚಂದ್ರಪೇರಳೆ' ಹಣ್ಣಿನ ಮರಕ್ಕೂ ಲಗ್ಗೆ ಇಟ್ಟೆವು. ಅಲ್ಲಿ ಒಂದೆರಡು ಹಣ್ಣು ಸಿಕ್ಕಲು 'ಪಾಲಿಗೆ ಬಂದದ್ದು ಪಂಚಾಮೃತ'ವೆಂದು ಅಲ್ಲಿಂದ ತಿರುಗೋ ನೋಡದೆ ಬಂದ ದಾರಿ ಬಿಟ್ಟು ಬೇರೆ ಹಾದಿ ಹಿಡಿದು ಮನೆಯ ಕಡೆ ಹೆಜ್ಜೆ ಹಾಕಿದೆವು'.
ಭೀಮ ಭಟ್ಟರ ತೋಟ ತಗ್ಗು ಪ್ರದೇಶವಾದ್ದರಿಂದ ನಾವು ಹೋಗುತ್ತಿದ್ದ ದಾರಿಯಿಂದ ತೋಟವನ್ನೂ ಹಾಗೂ ಹಾಕಿ ಬಂದ ಬೆಂಕಿಯನ್ನೂ ಸ್ಪಷ್ಟವಾಗಿ ಗುರುತಿಸಬಹುದಿತ್ತು. ಬೆಂಕಿ ನಾವು ಅಂದುಕೊಂಡಿರುವುದಕ್ಕಿಂತ ಹೆಚ್ಚಾಗಿಯೇ ಹಿಡಿದಿದ್ದ ತೋರಿ ಸ್ವಲ್ಪ ಭಯವೋ ಆಯಿತು. ನಾವೇನೂ, 'ಭೀಮ ಭಟ್ಟರ ಮೊಮ್ಮಕ್ಕಳನ್ನು ಆ ಪೇರಳೆ ಮರಗಳಿಂದ ದೂರವಿಡಲು ಬೆಂಕಿ ಹಚ್ಚಿ ಬಂದಿದ್ದೆವು'. ಆದರೆ ಚಳಿಗಾಲದ ತಿಳಿ ಗಾಳಿಗೆ ಬೆಂಕಿ ತನ್ನ ಕೆನ್ನಾಲಿಗೆಯನ್ನೇ ಚಾಚುವುದೆಂದು ತಿಳಿದಿರಲಿಲ್ಲ. ನಮ್ಮ ಅಜ್ಞಾನವನ್ನು ಶಪಿಸಿಕೊಂಡೆವು. " ಈ ಹಣ್ಣಿನ ರಾಶಿಯನ್ನು ಮನೆಗೆ ಕೊಂಡು ಹೋದರೆ ಯಾರಿಗಾದರೋ ಅನುಮಾನ ಬರುವುದರಲ್ಲಿ ಎರಡು ಮಾತಿಲ್ಲ! ಆದ್ದರಿಂದ ಮನೆಯ ಹಿಂದಿರುವ 'ಕರಿ ಕೊಟ್ಟಿಗೆಯ' ಒಳಗೆ ಅವಿಸಿಡುವುದೇ ಒಳ್ಳೆಯದು ಹೇಗೂ ಆ ಕಡೆ ಯಾರೂ ಸುಳಿಯುವುದಿಲ್ಲ " ಎಂದು ನನ್ನ ತಂಗಿ ಹೇಳಿದಳು. ಅದರಂತೆಯೇ ಹಣ್ಣುಗಳನ್ನು ಅವಿಸಿಟ್ಟು, ನಮಗೆ ಏನೂ ತಿಳಿದಿಲ್ಲವೆಂಬಂತೆ ಮಳ್ಳರಹಾಗೆ ಮನೆ ಸೇರಿದೆವು!
ಮರುದಿನ ಬೆಳಗ್ಗೆ ನಿದ್ದೆಯಿಂದ ಎಚ್ಚರವಾದರೂ ಹಾಸಿಗೆಯ ಮೇಲೆಯೇ ಬಿದ್ದು ಹೊಡಕುತ್ತಿರುವಾಗ ದೊಡ್ಡವರು ಬಿಸಿ! ಬಿಸಿ! ಕಾಪಿ ಕುಡಿಯುತ್ತಾ ಮಾಡುತ್ತಿದ್ದ ಬಿಸಿ! ಬಿಸಿ! ಚರ್ಚೆ ಕಿವಿಗೆ ಬಿದ್ದಿತು. " ಭೀಮ ಭಟ್ಟರ ಮನೆ ಕೆಲಸದ ಆಳು 'ಶುಕ್ರ' ನೆನ್ನೆ ರಾತ್ರಿ 'ನಲ್ಲಿ' ಗುಡ್ಡದ ಬಳಿ 'ಕೊಳ್ಳಿದೆವ್ವ' ನೋಡಿ ಚಳಿ ಜ್ವರ ಬಂದು ಮಲ್ಕೊಂಡಿದಾನಂತೆ!
ಗುಡ್ಡದ್ ಬುಡಕ್ಕೆ ಬೆಂಕಿ ಹಚ್ಚಿತ್ತಂತೆ. ಗಾಳಿಲ್ಲೆಲ್ಲಾ ಬೆಂಕಿ ನೋಡಿದ್ನಂತೆ" ಎಂದು ಅತ್ತೆ ಹೇಳುತ್ತಿದ್ದರು. ಅದಕ್ಕೆ ಮಾವ, "ಅವ್ನು ಕುಡ್ದಿದ್ನೋ ಏನೂ ಯಾರಿಗ್ ಗೊತ್ತು" ಎಂದು ಕೊಳ್ಳಿ ದೆವ್ವದ ಕಥೆಯನ್ನು ತಳ್ಳಿಹಾಕಿದರು. ಅದಕ್ಕೆ ಲಪ್ಪಿ, "ಅಲ್ಲೇ ಪಕ್ಕ ಒಣ ಹುಲ್ಲಿನ ರಾಶಿ ಹಾಕಿದ್ರು ಅದ್ಕು ಹತ್ತಿದೆ ಕಾಣಿ! ಇದ್ಯಾರೋ ಬೇಕಂತ ಮಾಡ್ಸಿದ್ರು ಮಾಡ್ಸಿರ್ಬೊದೇನಪ್ಪಾ!" ಎಂದಳು ಸುಮ್ಮನಿರಲಾರದೆ.
ಇದನೆಲ್ಲಾ ಮಲಗಿದಲ್ಲೇ ಕೇಳಿಸಿಕೊಂಡ ನಾವಿಬ್ಬರು ಹಾಕಿದ ಹೊದಿಕೆಯ ಮುಸುಕನ್ನು ಸೂರ್ಯ ನೆತ್ತಿಯಮೇಲೆ ಬಂದರೂ ತೆಗೆಯಲಾಗಲಿಲ್ಲ!
Super story, kollidevva konege yestottige melediddu.
ReplyDeleteNela gudsake parake hasigeya pakkakke bandu biddameleye yeddaddu!🤣
Delete