"ಕೊಪ್ಪರಿಗೆಯ ಬೆಲ್ಲ" (13) - ನೀನಾ?....ಕಾಡುಕೋಣ!

ನೀನಾ?....ಕಾಡುಕೋಣ!

        ಮರು ದಿನ ಮಬ್ಬು ಹರಿಯುತ್ತಿದ್ದಂತೆ ಒಬ್ಬೊಬ್ಬರೇ ಮನೆಗೆ ಆಗಮಿಸಿತೊಡಗಿದರು. ಪ್ರತಿಬಾರಿಯಂತೆ ಈ ಬಾರಿಯೂ ಮೊದಲು ಬಂದು ಎಲ್ಲರ ಸ್ವಾಗತಕ್ಕಾಗಿ ಹಣ್ಣುಗಳ ಮೇಳವನ್ನೇ ತರಿಸಿದ್ದೆವು. ಈ ಬಾರಿಯ ವಿಶೇಷವೆಂದರೆ ಇನ್ನೆರಡು ದಿನಗಳಲ್ಲಿ ನಡೆಯಲಿರುವ  'ಆಲೆಮನೆ'. ಅದಕ್ಕಾಗಿ ಕೇವಲ ನೆಂಟರಿಷ್ಟರಲ್ಲದೆ ಊರಿನ ಜನರೆಲ್ಲಾ ಒಟ್ಟಿಗೆ ಸೇರುವ ಸಂಭ್ರಮ! ಅದಕ್ಕಾಗಿ ಕ್ಷಣಗಣನೆ ಆರಂಭವಾಗಿತ್ತು. ತಯಾರಿಯೂ ಭರದಿಂದ ಸಾಗಿತ್ತು  ಆಲೆಮನೆಯ 'ಕಂಪ್ಲೀಟ್ ಎಂಜೋಯ್ಮೆಂಟ್ಗಾಗಿಯೇ ನಮ್ಮೆಲ್ಲಾ ಅಡ್ವೆಂಚರ್ಗಳನ್ನು ಆ ಮೊದಲೇ ಮುಗಿಸಿಕೊಂಡಿದ್ದೆವು'. 
        ನಮ್ಮ ಅಂದಿನ ದಿನ ಬೇಗವೇ ಪ್ರಾರಂಭವಾಗಿತ್ತು. ಆ ಮೊದಲು ಅಡುಗೆಮನೆಯ ನೊಣದ ಸದ್ದೂ ಕೇಳಿಸುವಷ್ಟು ನಿಶ್ಯಬ್ಧತೆ ಇದ್ದ ಮನೆಯಲ್ಲಿ ಈಗ ಕಿರುಚಿದರೂ ಯಾರಿಗೂ ಕೇಳಲಾರದಷ್ಟು ಗಲಾಟೆ-ಗೌಜು!. ಮನೆ ಜನಗಳಿಂದ ತುಂಬಿ ತುಳುಕುತ್ತಿತ್ತು. ಅಡುಗೆ ಮನೆ, ದೇವರ ಒಳ, ಉಪ್ಪರಿಗೆ, ಜಗುಲಿ, ಅಂಗಳ,  ಹಿತ್ತಲು, ಕೊಟ್ಟಿಗೆ, ತೋಟ, ಕೆರೆ-ಕಟ್ಟೆ ಹೀಗೆ ಎಲ್ಲಿ ನೋಡಿದರೂ ಅಲ್ಲಿ ಹೆಂಗಸರ ಹರಟೆ. ಕೂತಲ್ಲಿ ನಿಂತಲ್ಲಿ ಎಲೆ-ಅಡಿಕೆ ಹಾಗು ಬಿಸಿ ಬಿಸಿ ಕಾಪಿಯ ಅನುಪಾನ! ಒಟ್ಟಾರೆ ಮನೆಯ ಪರಿಸರ ಆ ಮಲೆನಾಡಿನ ನೀರವ ಮೌನವನ್ನು ಹಾಸ್ಯ ಮಾಡುವಂತಿತ್ತು! 

        ಪಂಕ್ತಿಯಲ್ಲಿ ಕುಳಿತು ಬಾಳೆ ಎಲೆಯಲ್ಲಿ ಕಡುಬು ತಿಂದು ಕಾಪಿ ಕುಡಿಯುತ್ತಾ, ನಗು ತಮಾಷೆ ಒಬ್ಬರನ್ನೊಬ್ಬರು ಕಾಲು ಎಳೆಯುವುದು ಎಲ್ಲವೂ ಶುರುವಾಯಿತು. ಇದು ಅತ್ಯಂತ ಸಂತಸದ ಕ್ಷಣಗಳು ಎಂದರೆ ತಪ್ಪಾಗಲಾರದು. ನಾವೆಲ್ಲ ಕಸಿನ್ಸ್ ಸೇರಿಯೇ ಲೆಕ್ಕ ಇಪ್ಪತ್ತಕ್ಕೂ ಹೆಚ್ಚು! ಹಾಗೆಯೆ ಒಟ್ಟಿಗಿರುವಾಗ ಮಾಡುವ ಮಜಾ ಡಬ್ಕಿ ಡಬಲ್! ಸಂಜೆವೇಳೆ ಎಲ್ಲರೂ ಬಾಳೆ ಗುಡ್ಡ ಹತ್ತಿ ಸೂರ್ಯಾಸ್ಥ ನೋಡುವ ಯೋಜನೆ ಹಾಕಿಕೊಂಡೆವು. ಎಲ್ಲರ ಜೊತೆ ಸಂತೋಷದಿಂದಿರುವಾಗ ಹೊತ್ತು ಹೋಗುವುದೇ ತಿಳಿಯುವುದಿಲ್ಲ. ಅದೇ ಅಂದಿನ ನಮ್ಮ ಮುಳುಗಡೆಯ ಪರಿಕ್ರಮಣವನ್ನು ನೆನೆಸಿಕೊಂಡರೆ ಆ ಕಾಡಿನಲ್ಲಿ ಜೀವ ಭಯದಿಂದ ಕಳೆದ ಒಂದೊಂದು ಕ್ಷಣವೂ ಒಂದೊಂದು ಯುಗಗಳಂತೆ ಭಾಸವಾಗಿತ್ತು. ಇದು 'ಇನ್ಸ್ಟನ್' ನ "ಥಿಯರಿ ಆಫ್ ರಿಲೇಟಿವಿಟಿ" ಯ ಒಂದು ಪುಟ್ಟ ನಿದರ್ಶನ ಎಂದರೆ ತಪ್ಪಾಗಲಾರದು! ಮದ್ಯಾಹ್ನದ ಮೃಷ್ಟಾನ್ನ ಭೋಜನವನ್ನು ಕರಗಿಸಲು ಕಾಪಿ ಎಂಬ ತೀರ್ಥ ಬಾಯಿಗೆ ಬೀಳಲೇಬೇಕು ಅಲ್ಲವೇ? ನಾವು ಮಲೆನಾಡಿನವರು ಊಟ ಆಗಿ ಬಾಯಿತೊಳೆದ ಮರುಕ್ಷಣವೇ ಕಾಪಿ ಕುಡಿಯಲು ತಯಾರಿರುತ್ತೇವೆ... ಎರಡನೆಯ ರೌಂಡ್ ಕಾಪಿ ಆದಮೇಲೆ ನಿದಾನವಾಗಿ ಎಲ್ಲರನ್ನು ಹೊರಡಿಸಿಕೊಂಡು ಬಾಳೆ ಗುಡ್ಡದ ಕಡೆ ಹೊರಟೆವು. ಹೋಗುವಾಗ ದಾರಿಯಲ್ಲಿ ಮನೆಯ ಹಿಂಬದಿಯ 'ಕರಿ ಕೊಟ್ಟಿಗೆ''ಯಲ್ಲಿ ಅವಿಸಿಟ್ಟ ರುಚಿಯಾದ ಪೇರಳೆ ಹಣ್ಣುಗಳನ್ನೂ ಸಹ ಕೊಂಡೊಯ್ದೆವು. ಆ ವೇಳೆಗಾಗಲೇ ನೇರಳೆ ಹಣ್ಣು ಬಹುಪಾಲು ಖಾಲಿಯೇ ಆಗಿಬಿಟ್ಟಿತು. ನಮ್ಮಿಬ್ಬರಿಗೆ ಆ ಹಣ್ಣಿನ ಪಿತ್ತ ಈಗಾಗಲೇ ಇಳಿದಿತ್ತಾದ್ದರಿಂದ ಹಂಚುವುದರಲ್ಲಿಯೇ ಖುಷಿಯನ್ನು ಕಂಡುಕೊಂಡೆವು. ಮೊದಲು ನೇರಳೆ ಮನೆ ಬ್ಯಾಣವನ್ನು ತಲುಪಬೇಕು ನಂತರ ಅಲ್ಲಿಂದ ಬಾಳೆ ಗುಡ್ಡವನ್ನು ಹತ್ತಬಹುದು. ಸಂಜೆಯ ವೇಳೆಗೆ ಬ್ಯಾಣದ ಮೇಲೆ ಬೀಸುತ್ತಿದ್ದ ಗಾಳಿ ನಮ್ಮನ್ನೇ ಹಾರಿಸಿಕೊಂಡು ಹೋಗುವಷ್ಟು ಪ್ರಭಲವಾಗಿತ್ತು. ಹಿಂದಿನ ದಿನದ ನಮ್ಮ ಬೆಂಕಿಯ ಜೊತೆಗಿನ ಚೆಲ್ಲಾಟ ನೆನಪಿಗೆ ಬಂತಾದರೂ ತೋರಗೊಡಲಿಲ್ಲ. 

        ಎಲ್ಲರ ಸಂಗಡ ಗುಡ್ಡ ಹತ್ತುವ ಮಜವೇ ಬೇರೆ! ದಾರಿಯಲ್ಲಿ ಹೋಗುತ್ತಾ ಹಾವು ಬಂದರೆ ಏನು ಮಾಡಬೇಕು? ಹುಲಿ ಬಂದರೆ ಎತ್ತ  ಓಡುವುದು? ಕಾಡು ಕೋಣ ಒಮ್ಮೆಲೇ ನುಗ್ಗಿದರೆ ಎಲ್ಲಿ ಅಡಗಿಕೊಳ್ಳುವುದು? ಎಂದೆಲ್ಲ ಸುಖಾಸುಮ್ಮನೆ ಪ್ರಶ್ನೆಗಳನ್ನು ಕೇಳುತ್ತಾ ಬರುವ ಉತ್ತರಗಳನ್ನು ಕೇಳಿ ನಗುತ್ತಾ ಅಂತೂ ಗುಡ್ಡ ಹತ್ತಿ ಬಾಳೆ ಗುಡ್ಡದ ತುತ್ತ ತುದಿಯಲ್ಲಿ ಬಂದು ನಿಂತೆವು. ಎಂತಹ ಕಲ್ಲು ಹೃದಯಿಯೂ ಸಹ ಆ ಪ್ರಕೃತಿ ಸೌಂದರ್ಯಕ್ಕೆ ಸೋಲದೆ ಇರಲಾರ! ಅಂತಹ ದೃಶ್ಯವೈವಿಧ್ಯತೆ, ಅದನ್ನು ಕಣ್ಣು ತುಂಬಿಸಿಕೊಳ್ಳುವುದೇ ನಮ್ಮ ಸೌಭಾಗ್ಯ! ಎಲ್ಲರೂ ಸುತ್ತಲೂ ಕೂತು, "ತಂದ ಹಣ್ಣುಗಳನ್ನು ತಿನ್ನುತ್ತಾ ಹರಟೆ ಹೊಡೆಯುತ್ತಾ, ದೂರದ ಬೆಟ್ಟಗಳನ್ನು ನೋಡಿ ಅಲ್ಲಿಯೂ ಹೋಗುವ ಹಂಬಲ ತೋರುತ್ತಾ, ಅಲ್ಲೇ ಕೆಳಗೆ ಕಾಣುತ್ತಿರುವ ಶರಾವತಿಯ ಹಿನ್ನೀರಿನ ಶಾಂತತೆಯನ್ನು ಪ್ರಶಂಸಿಸುತ್ತಾ, 

ಎದುರು ಗುಡ್ಡದ ತಳದಲ್ಲಿ ನಮಗೆ ಅಂತ್ಯಂತ ಸಮೀಪದಲ್ಲೇ ಮೇಯುತ್ತಿದ್ದ ದೊಡ್ಡ ಕರಿ ಕೋಣವನ್ನು; ಕಾಡು ಕೋಣವೆಂದು ತಮಾಷೆಗೆ ಭಾವಿಸಿ ಅದನ್ನು ಕೂಗಿ ಕಿರುಚಿ ಹೆದರಿಸಿ ಓಡಿಸಲು ಪ್ರಯತ್ನಿಸುತ್ತಾ ಹೊತ್ತು ಕಳೆದೆವು". 

ಸೂರ್ಯಾಸ್ತವಾದಮೇಲೆ ನಿಶೆಯ ಆಗಮನಕ್ಕೆ ಬಹಳ ಸಮಯ ಬೇಕಾಗಿರಲಿಲ್ಲ. ನಾವುಗಳು ಮೇಲಿನಿಂದ ಓಡಿಕೊಂಡು ಬಂದು  ನಿಮಿಷಾರ್ಧದಲ್ಲಿ ಗುಡ್ಡ ಇಳಿದಿದ್ದೆವು. ಹಾಗೆ ಇಳಿಯುವಾಗ ಸಿಗುವ ಮಜಾ ಯಾವ "ರೋಲರ್ ಕೋಸ್ಟರ್" ರೈಡ್ಗೂ ಕಡಿಮೆಯಿಲ್ಲ! 
        ದಾರಿಯಲ್ಲಿ ಹೋಗುವಾಗ ಇಳಿಜಾರಾದ ಮಣ್ಣಿನ ದಾರಿ, ನಮ್ಮನ್ನು ಬಿಟ್ಟು ಇಲ್ಲಿ ಬೇರೊಬ್ಬರಿಲ್ಲ ಎಂದು ಬೀಗುತ್ತಾ ಹೋಗುತ್ತಿರುವಾಗ ಕಾಡಿನಿಂದ ಒಂದು ಪ್ರಾಣಿ ರಸ್ತೆಗೆ ಹಾರಿತು. ಹಿಂದೆ ತಿರುಗಿ ನೋಡಲು ಕಪ್ಪು ಬಣ್ಣದ ಕೋಣ!. ಇಳಿಜಾರಿನಲ್ಲಿ ಬರುತ್ತಿರುವಾಗ ಅದರ ನಡೆ ಕೊಂಚ ವೇಗವಾಗಿಯೇ ಇತ್ತು. ನ ಆ ಮೊದಲೇ ಹೇಳಿದಂತೆ ನಮ್ಮದು ತೋರಿಕೆಯ ಧೈರ್ಯ ಪ್ರದರ್ಶನ! ಕಾಡು ಕೋಣದ ಗುಂಗಿನಲ್ಲಿಯೇ ಇದ್ದ ನಮಗೆ ಆ ಕೋಣವನ್ನೇ ನಮ್ಮ ಪುಕ್ಕಲ ಮನಸ್ಸು ಕಾಡು ಕೋಣವೆಂದು ಪರಿಚಯಿಸಿತು. ಎಲ್ಲರೂ ಕಕ್ಕಾಬಿಕ್ಕಿಯಾಗಿ ನಾಲ್ಕು ದಿಕ್ಕುಗಳಲ್ಲಿ ಎದ್ನೋ ಬಿದ್ನೋ ಎಂದು ಓಡಿಹೋದೆವು! ಏನಾಗುತ್ತಿದೆ? ಏನಾಯಿತು? ಎಂದು ನನ್ನ ಮಾವನ ಮಗಳಿಗೆ ತಿಳಿಯಲೇ ಇಲ್ಲ ಅದರ ಪರಿಣಾಮವಾಗಿ ಅವಳು ಅಲ್ಲೇ ನಿಂತಳು. ನಮ್ಮ ಗಾಬರಿಗೆ, ಕೂಗಿಗೆ ಪಾಪ ಆ ಕೋಣವೂ ಹೆದರಿ ನಮ್ಮ ಮಾವನ ಮಗಳ ಬಳಿಯೇ ಓಡಿ ಬರತೊಡಗಿತು. ಆದರೆ ಅವಳ ಸಮಯಪ್ರಜ್ಞೆಯಿಂದ ಕೋಣ ಹಾಯುವುದನ್ನು ತಪ್ಪಿಸಿಕೊಂಡು ಮನೆಗೆ ಹೋಗಿದ್ದಳು. ನಾನು ಹೆದರಿ ಹಿಂದೆ ಮುಂದೆ ನೋಡದೆ ಮನೆಯ ಹಿಂದಿನ ಆ ಕರಿ ಕೊಟ್ಟಿಗೆಯನ್ನು ಆಶ್ರಯಿಸಿದ್ದೆ. 

ತುಸು ಹೊತ್ತಿನ ನಂತರ ಮನೆಗೆ ವಾಪಸಾಗಲು, ಎಲ್ಲರ ಮುಖಕ್ಕೆ ನನ್ನ ಮಾವನ ಮಗಳಿಂದ 'ಮಂಗಳಾರತಿಯಾಗದೇ' ಇರಲಿಲ್ಲ!
        ಮಾರನೆಯ ದಿವಸ ಮನೆಗೆ ಕೆಲಸದವರ ಆಗಮನ, ಆಲೆಮನೆಯ ತಯಾರಿ ನಡೆಯುತ್ತಿತ್ತು. ನಮಗೆಲ್ಲ ಆಗತಾನೆ ಬೆಳಗಾಗಿತ್ತು ಕಾಪಿ ಕುಡಿಯುತ್ತ ಅಂಗಳದಲ್ಲಿ ಕೂತಿದ್ದೆವು. ಮನೆಯ ಹೆಂಗಸರು ಅಂಗಳದಲ್ಲಿ ಹಪ್ಪಳ ಸಂಡಿಗೆ ಒಣಗಿಸುತ್ತಿದ್ದರು. ಆ ವೇಳೆಗೆ 'ಶಾರದ' ತನ್ನ ಬಚ್ಚು ಬಾಯಿಯಲ್ಲಿ ಮಾತನಾಡುತ್ತಲೇ ಅಂಗಳಕ್ಕೆ ಬಂದಳು. 

ನಮ್ಮೆಲ್ಲರ ಕುಶಲೋಪರಿಯನ್ನು ವಿಚಾರಿಸಿ ಹಿಂದಿನ ದಿನ ನಾವು ಬಾಳೆ ಗುಡ್ಡಕ್ಕೆ ಹೋಗಿರುವ ಬಗ್ಗೆ ವಿಚಾರಿಸಿದಳು. 'ಶಾರದ' ಆಗ್ಗಾಗ್ಗೆ ನಮ್ಮ ಮನೆಯ ಕೆಲಸಕ್ಕೆ ಬರುವುದುಂಟು. ಅವಳ ಮನೆ ಅಲ್ಲೇ ಎದುರು ಗುಡ್ಡದ ತಳದಲ್ಲಿರುವ ಕೆಳತೊಟದ ಪಕ್ಕದಲ್ಲಿದೆ. ನಮ್ಮ ಬಾಳೆ ಗುಡ್ಡದ ಮೇಲಿನ ಕೂಗು ಕಿರಚಾಟವನ್ನು ಕೇಳಿ ಸ್ವಲ್ಪ ಗಾಬರಿ ಹಾಗೂ ಕುತೂಹಲವಿಟ್ಟುಕೊಂಡೇ 'ಸಧ್ಯ ಮನೆಗೆ ಆರಾಮಾಗೆ ಬಂದಿರಲ್ಲ' ಎಂದಳು. ನಮಗೆ ಅವಳ ಮಾತು ಅರ್ಥವಾಯಿತಾದರೂ ಮಾತಿನ ಭಾವ ತಿಳಿಯಲಿಲ್ಲ. ನಮ್ಮ ಅತ್ತೆಯನ್ನುದ್ದೇಶಿಸಿ," ನೆನ್ನೆ ನಮ ಮನೆ ಹತ್ರಕ್, ದೊಡ್ಡ್ ಕಾಡ್ ಕೋಣ ಮರೈರ! ನಮ ಮನೆ ಪಕ್ಕದ್ ಗುಡ್ದ್ ದಲ್ಲೇ ಮೈತಾ ಅಕಂಡಿತ್ತು! ಯಾರ್ದ್ ಎದ್ರಿಕೆ ಎತ್ತ ಅದ್ಕೆ?! ನಿಮ್ ಮನೆ ಮಕ್ಳು ಅಂತ ಆಗ್ ಅಂದಾಜಗ್ಲಿಲ್ಲ ನಂಗೆ, ಯಾರೋ, ಕಾಡ್ ಕೋಣ ನೋಡೇ ಕುಗ್ತ್ರು ಅಂತ ತಿಳ್ದೆ!" ಎಂದಳು ನಿಟ್ಟುಸಿರು ಬಿಡುತ್ತ. ಅವಳ ಮಾತು ಕೇಳಿ ನಮ್ಮ ಕಾಪಿಯ ಜೊತೆ ನಮ್ಮ ದೇಹವೂ ತಣ್ಣಗಾಗಿತ್ತು!.

Comments

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "