"ಕೊಪ್ಪರಿಗೆಯ ಬೆಲ್ಲ" (15) - ಆಲೆಮನೆಯೆಂಬ ವಿಶೇಷದಮನೆ!!
ಆಲೆಮನೆಯೆಂಬ ವಿಶೇಷದಮನೆ!!
ಕೊಪ್ಪರಿಗೆಯ ಬೆಲ್ಲದ ರುಚಿ ನೋಡುವ ದಿನ ಕೊನೆಗೂ ಬಂದೆ ಬಿಟ್ಟಿತು. ಎದ್ದ ಕೂಡಲೇ ಮಾಡಿದ ಮೊದಲನೆಯ ಕೆಲಸ ಹಲ್ಲು ಉಜ್ಜುತ್ತಾ ಹಿತ್ತಲ ಅಂಗಳದ ತುದಿಯಲ್ಲಿ ನಿಂತು ಆಲೆಮನೆಯ ಚಲನ ವಲನಗಳನ್ನು ವೀಕ್ಷಿಸಿದ್ದು. ಅಷ್ಟರಲ್ಲಾಗಲೇ ಅಲ್ಲಿ ಒಂದೆರಡು ಕೆಲಸದ ಆಳು ರಾಶಿ ಹಾಕಲಾದ ಕಬ್ಬಿನ ಹೊರೆಗೆ ಕೈ ಹಾಕಿಯಾಗಿತ್ತು.
ಆಲೆಕಣೆಯನ್ನು ತಿರುಗಿಸಲು ಕೋಣಗಳು ಸನ್ನದ್ಧವಾಗಿ ನಿಂತಿದ್ದವು. ಬೇಗ ತಿಂಡಿ ಸ್ನಾನ ಎನ್ನುವ ಶಾಸ್ತ್ರವನ್ನು ಮುಗಿಸಿ ಆಲೆಮನೆಗೆ ಹೋಗುವ ಕೌತುಕ ನಮ್ಮಲ್ಲಿ ಹೆಚ್ಚಾಯಿತು.
ಭೂಮಿಯು ಸೂರ್ಯನ ಸುತ್ತ ಸುತ್ತುವ ಹಾಗೆ ಜೋಡಿ ಕೋಣಗಳು ಓಡಿಸುವವನ ಅನಕೆಯಂತೆ, ಕಬ್ಬಿನಿಂದ ಹಾಲನ್ನು ತೆಗೆಯಲು ಗಾಣವನ್ನು ತಿರುಗಿಸುವ ಮೂಲಕ ಆಲೆಕಣೆ ಸುತ್ತ, ಸುತ್ತ ಹಾಕತೊಡಗಿದವು.
ಪಾಲಕನಿಂದ ಕೋಣಗಳಿಗೆ ಬರುತ್ತಿದ್ದ ಪ್ರೋತ್ಸಾಹದ ಹೊಯ್! ಹೊಯ್! ಸದ್ದು ಹಾಗು ಅವನ ರಾಗ ಮನರಂಜಿಸುವಂತಿತ್ತು. ಆಲೆಕಣೆಗೆ ಕಬ್ಬನ್ನು ಕೊಡಲು ಭೋಜ ಕುಳಿತಿದ್ದನು. ನಮಗೆಲ್ಲರಿಗೂ ಕಬ್ಬು ಕೊಡುವ ಕೆಲಸವು ಸರತಿಯಲ್ಲಿ ದೊರಕಲು, ನಾವುಗಳು ಖುಷಿಯಿಂದಲೇ ಮಾಡಿದೆವು. ವದಿಗೆಯ ಮೂಲಕ ಕಡಾಯಿಗೆ ಹರಿಯುತ್ತಿದ್ದ ಕಬ್ಬಿನ ಹಾಲು ಹಾಗು ಅದರ ಹಿತವಾದ ಘಮ ಮನಸ್ಸಿಗೆ ಹಾಯ್ ಅನಿಸುವಂತಿತ್ತು. ನಮಗೆಲ್ಲರಿಗೂ ಕುಡಿಯಲು ಸಾಕೆನ್ನಿಸುವಷ್ಟು ಕಬ್ಬಿನಹಾಲು.
ಕಬ್ಬಿನಹಾಲು ಇಳಿಸುವ ಪೈಪೋಟಿಯೇ ಅಲ್ಲಿ ಪ್ರಾರಂಭವಾಗಿ, ಹೊಟ್ಟೆ ಅಳತೆ ತಪ್ಪಿ ಕುಡಿದಿದ್ದರಿಂದ ಒಬ್ಬನಿಗೆ ವಾಂತಿಯೂ ಆಗಿ ತಿಂದ ತಿಂಡಿಯು ಹಾಗೆಯೇ ಆಚೆ ಬಂದಿತ್ತು!!
ಇತ್ತ ಕಡಾಯಿಯು ಎರಡು ಬಾರಿ ಕಬ್ಬಿನ ಹಾಲಿನಿಂದ ತುಂಬುತ್ತಿದ್ದಂತೆ ಅದರ ಮುಂದೆ ಕಟ್ಟಲಾಗಿದ್ದ ಭಾರಿ ಗಾತ್ರದ ಒಲೆಯ ಮೇಲೆ ಇರಿಸಲಾಗಿದ್ದ ಕೊಪ್ಪರಿಗೆಗೆ ಸುರಿಯಲಾಯಿತು.
ಆ ಮೊದಲೇ ನಾವು ಹಿಂದಿನ ದಿವಸ ತಯಾರಿಸಿದ್ದ ಬಾಳೆದಿಂಡಿನ ಹಾರವನ್ನು ಮಾವನಿಗೆ ಕೊಟ್ಟಿದ್ದೆವು. ಅವರು ಹಾರವನ್ನು ಕೊಪ್ಪರಿಗೆಯ ಹಿಡಿಗೆ ಕಟ್ಟಿ ಹಾರವು ಹಾಲಿಗೆ ಅದ್ದುವಂತೆ ತೇಲಿಬಿಟ್ಟಿದ್ದರು. ಈ ಒಲೆಯನ್ನು ಉರಿಸುವುದಕ್ಕಾಗಿ ಪಕ್ಕದಲ್ಲಿ ದೊಡ್ಡ ಸೌದೆ ಕಂಟಿಯನ್ನೇ ಇಟ್ಟಿದ್ದರು. ಮಾವ ಹಾಗು ಕೊಳ್ಳಿ ಜ್ವರದಿಂದ ಎದ್ದ ಶುಕ್ರ, ಕೈಯಲ್ಲಿ ದೊಡ್ಡ ಕಬ್ಬಿಣದ ಸಟಕವನ್ನು ಹಿಡಿದು ಹಾಲನ್ನು ಒಂದೇಸಮನೆ ಮಗುಚತೊಡಗಿದರು.
ಇನ್ನು ಕನಿಷ್ಠ ನಾಲ್ಕು ತಾಸಾದರೂ ಹಿಡಿದೀತು, ಸಂಜೆಯ ವೇಳೆಗೆ ಬಂದರಾಯಿತೆಂದು ಅಲ್ಲಿಂದ ಕಾಲುಕಿತ್ತೆವು.
"ಬನ್ನಿ ಮಕ್ಕಳೇ ಬೆಲ್ಲ ಸುರಿದಾಯಿತು" ಎಂಬ ಮಾವನ ಧ್ವನಿ ಕೇಳುತ್ತಿದ್ದಂತೆ, "ಹನುಮಂತ ಅಶೋಕವಾಟಿಕೆಗೆ ಲಗ್ಗೆ ಇಟ್ಟಂತೆ, ಈ ನಮ್ಮ ಬಾಲವಿಲ್ಲದ ಮರ್ಕಟ ಸೇನೆಯು ಆಲೆಮನೆಗೆ ಲಗ್ಗೆ ಇಟ್ಟಿತು".
'ನೊರೆಬೆಲ್ಲ' ತಿನ್ನುವ ಸಲುವಾಗಿ ಅಂದು ನಾವು ಯಾರು ಒಂದು ತುತ್ತು ಅನ್ನವನ್ನೂ ಗಂಟಲಲ್ಲಿ ಇಳಿಸಿರಲಿಲ್ಲ. ಚಪ್ಪರದ ಕೆಳಗೆ ಇಟ್ಟ ದೊಡ್ಡ ಮರದ ಮರಿಗೆಗೆ ಸುರಿಯಲಾದ ನೊರೆಬೆಲ್ಲ ನೋಡಲು ಎಷ್ಟು ಚೆಂದವೋ ಅಷ್ಟೇ ಚೆಂದ ಅದರ ಸುವಾಸನೆ! ಅಲ್ಲೇ ಗದ್ದೆ ಅಂಚಿನಲ್ಲಿದ್ದ 'ಮುದುಕದ ಎಲೆಗಳನ್ನು' ಕೊಯ್ದು ತಂದು, ಆಲೆಕಣೆಯ ಪಕ್ಕದಲ್ಲಿ ರಾಶಿ ಹಾಕಲಾದ ಕಬ್ಬಿನ ಚರಟದಲ್ಲಿ ಒಂದನ್ನು ಸ್ಪೂನ್ ಆಗಿ ಆಯ್ದುಕೊಂಡೆವು. ಮಾವ, ನಮ್ಮೆಲ್ಲರ ಎಲೆಗೆ ಕೊಪ್ಪರಿಗೆಯ ಬೆಲ್ಲವನ್ನು ಹಾಕಿ, ಬಾಣಲೆಗೆ ಕಟ್ಟಿದ್ದ ಬಾಳೆದಿಂಡಿನ ಸರವನ್ನೂ ಕೊಟ್ಟರು. ಅದನ್ನು ತೆಗೆದುಕೊಂಡು ಎಲ್ಲರೂ ಗದ್ದೆ ಅಂಚಿನಲ್ಲಿ ಕಾಲು ಇಳಿಬಿಟ್ಟುಕೊಂಡು ಕೂತು ಒಂದೊಂದೇ ಚಮಚ ನೊರೆಬೆಲ್ಲವನ್ನು ಬಾಯಿಗೆ ಹಾಕುತ್ತಾ ಅದರ ಸವಿಯಲ್ಲಿ ಜಗತ್ತನ್ನೇ ಮರೆತೆವು. "ಬಲ್ಲವನೇ ಬಲ್ಲ, ಬೆಲ್ಲದ ರುಚಿಯ!" ನೊರೆ ಬೆಲ್ಲಕ್ಕಿಂತ ರುಚಿ ಬೇರೊಂದಿಲ್ಲ. ಕಬ್ಬಿನಹಾಲಿನ ಜೊತೆಗೆ ತಾನು ನಾಲ್ಕುತಾಸು ಬೆಂದು ಅತ್ಯದ್ಭುತವಾದ ರುಚಿಯನ್ನು ಪಡೆದಿದ್ದ ಬಾಳೆದಿಂಡಿನ ಡೆಸರ್ಟ್, ಎಲ್ಲವನ್ನೂ ಮೀರಿಸಿತ್ತು.
ಸಂಜೆ ಆಗುತ್ತಿದ್ದಂತೆ ಊರಮನೆಯವರೆಲ್ಲ ಕೈಯಲ್ಲಿ ಕ್ಯಾನ್ ಹಿಡಿದು ಬರತೊಡಗಿದರು. ಅವರ ಉಪಚಾರದ ಜವಾಬ್ದಾರಿ ನಮ್ಮ ಮೇಲಿತ್ತಾದ್ದರಿಂದ ಬಂದವರನ್ನು ಆತ್ಮೀಯವಾಗಿ ಬರಮಾಡಿಕೊಂಡು ಕುಡಿಯುವಷ್ಟು ಕಬ್ಬಿನ ಹಾಲನ್ನು ಸರಬರಾಜು ಮಾಡಿದೆವು. ಹಾಗೆಯೇ ಭೀಮ ಭಟ್ಟರ ಮೊಮ್ಮಕ್ಕಳೂ ಬಂದಿದ್ದರು. ಎಲ್ಲರ ಜೊತೆ ಗದ್ದೆಯಲ್ಲಿ ಐಸ್ ಪೈಸ್! ಕಳ್ಳ ಪೊಲೀಸ್! ಹೇಗೆ ಹತ್ತು ಹಲವು ಆಟಗಳನ್ನು ಆಡುತ್ತಾ ಅಂದಿನ ಸಂಜೆಯನ್ನು ಪರಿಪೂರ್ಣರೀತಿಯಲ್ಲಿ ಆನಂದಿಸಿ ಕಳೆದೆವು. ಮನೆಗೆ ಬಂದವರೆಲ್ಲರೂ ಕ್ಯಾನ್ ತುಂಬಾ ಕಬ್ಬಿನ ಹಾಲು ಹಾಗು ಒಂದು ಜೊತೆ ಕಬ್ಬನ್ನು ಕೊಂಡು ಅವರವರ ಮನೆಗಳಿಗೆ ಮರಳಿದರು. ಕೊಪ್ಪರಿಗೆಯ ಬೆಲ್ಲದ ರುಚಿ ನಮ್ಮ ನಾಲಿಗೆಯ ಮೇಲಾದರೆ, ಅದರ ಘಮ ಇಡೀ ವಾತಾವರಣವನ್ನೇ ಆವರಿಸಿತ್ತು!!
Comments
Post a Comment