"ಕೊಪ್ಪರಿಗೆಯ ಬೆಲ್ಲ" (16) - " ನಾಗಮಣಿ "

                                                                 "ನಾಗಮಣಿ"

       ಸಂಜೆ ೭ ಘಂಟೆ, ಮಲೆನಾಡಿನ ಮಟ್ಟಿಗೆ ರಾತ್ರಿ ಎಂದೇ ಹೇಳಬಹುದು! ಆಲೆಮನೆಯ ಕೊಪ್ಪರಿಗೆಯ ಬೆಲ್ಲದ ಸವಿ ಬಾಯಲ್ಲಿಯೇ ನೆಲೆಸಿತ್ತು, ನೀರು ಬೆಲ್ಲದ ಸುವಾಸನೆ ಇನ್ನು ಮೂಗಿನಿಂದ ಹೋಗಿರಲಿಲ್ಲ. ಒಂದು ದೊಡ್ಡ ಸಂಭ್ರಮಕ್ಕೆ ನಾವೆಲ್ಲರೂ ಸಾಕ್ಷಿಯಾದಂತೆ ಭಾಸವಾಗುತ್ತಿತ್ತು. ವಿಶೇಷವಾದಮೇಲೆ ಸಂಜೆಯ ವೇಳೆ ಪಾರಾಯಣಕ್ಕೆ ಕೂರಲಿಲ್ಲವೆಂದರೆ ಅದರ ಪ್ರತಿಷ್ಠೆಗೆ ಕುತ್ತಲ್ಲವೇ? ಆಲೆಮನೆಗೆ ಊರಮನೆಯವರು, ನೆಂಟರಿಷ್ಟರು ಬಂದಮೇಲೆ; ಜಾಕಿ, ಎಕ್ಕ, ರಾಜ, ರಾಣಿ  ಕರಿಯ ಕಂಬಳಿಯ ಮೇಲೆ ಆಸೀನರಾಗಲೇಬೇಕಲ್ಲವೇ?! ಕಂಬಳಿಯ ಸುತ್ತ ರಮ್ಮಿ ಆಟಕ್ಕೆ ಕೂತ ನಮಗೆ ಪರಂಪರಾಗತವಾಗಿ ಬಂದ ಒಂದು ಸಂಪ್ರದಾಯವನ್ನು ಪಾಲಿಸಿದಷ್ಟು ಖುಷಿಯಾಗುತ್ತಿತ್ತು. 

'ಸೀಕ್ರೆಟ್ ಸೆವೆನ್' ಆಟದಲ್ಲಿ ಜೋಕರ್ ನ ಸೀಕ್ರೆಟ್ ಹೇಗೆ ಬಯಲಾಗುತ್ತದೆಯೋ ಹಾಗೆಯೇ ಮಲೆನಾಡಿನ ಬಹಳಷ್ಟು ಕಥೆಗಳು, ನಿಗಢಗಳು ಒಂದೊಂದೇ ಬಯಲಿಗೆ ಬರತೊಡಗಿದವು. ನಿದಾನವಾಗಿ ಆಟದಮೇಲಿನಿಂದ ಮನಸ್ಸು ಸರಿದು, ಆ ಮಲೆನಾಡಿನ ಜನರ ಜೀವನ ಹಾಗು ಅವರಿಗೆ ಎದುರಾದ ನೈಜ ಸನ್ನಿವೇಶಗಳು ಹಾಗು ಕೆಲವು ವಿಸ್ಮಯಕಾರಿ ವಿಷಯಗಳ ಮೇಲೆ ಬಂದು ನಿಂತಿತು. ಮನೆಯ ಹಿರಿಯರು ಒಂದೊಂದೇ ವಿಷಯಗಳ ಬಗ್ಗೆ ಚರ್ಚೆಗೆ ಸನ್ನದ್ಧರಾದಂತೆ ತೋರಿ ಕೆಲ ಹೆಂಗಸರು, "ಇದು ಮುಗಿಯದೆ ಕಥೆ" ಎಂದು ಅನ್ನಕ್ಕೆ ಇಡಲು ಅಡುಗೆಮನೆ ಹೊಕ್ಕರು. ಮಾವ, ಕುಡಿಯಲು ಬಿಸಿ! ಬಿಸಿ! ಕಾಪಿ ಸಿಕ್ಕರೆ ಮಾತುಕತೆಗೆ ಉಲ್ಲಾಸ ಬಂದೀತು ಇಲ್ಲವಾದರೆ ನಿದ್ದೆ ಎಳೆಯುತ್ತದೆ ಎಂದರು. ಅವರ ಇಚ್ಛೆಯಂತೆ ಒಳಗಿನಿಂದ ಕಾಪಿಯೂ ಸರಬರಾಜಾಯಿತು. 
       ಮಲೆನಾಡಿನವರಿಗೂ ಕರಾವಳಿ ತೀರದವರಿಗೂ ಇರುವ ಸಾಮ್ಯತೆಗಳಲ್ಲಿ ಒಂದು ನಾಗದೇವತೆಯ ಆರಾಧನೆ ಹಾಗು ನಾಗನ ಮೇಲಿರುವ ಅಗಾಧವಾದ ಭಕ್ತಿ. ಅಂದಿನ ಚರ್ಚೆಯಿಂದ ನನಗೆ, 'ಮಲೆನಾಡಿನ ಜನರು ನಾಗದೇವತೆಯನ್ನು  ಆರಾಧಿಸುವ ಬಗೆ ಹಾಗು ನಡೆಸಿಕೊಂಡು ಬಂದ ಸಂಪ್ರದಾಯಗಳನ್ನು ತಿಳಿದುಕೊಂಡಂತಾಯಿತು'. 'ಮನೆಯ ಅಡಿಗೆ ಓಲೆ ಮಾಡುವ ಮುನ್ನ, ಕುಡಿಯುವ ನೀರಿನ ಬಾವಿ ತೊಡುವ ಮುನ್ನ, ಹೀಗೆ ಹತ್ತು ಹಲವು ವಿಷಗಳನ್ನು ಕಾರ್ಯಗತ ಮಾಡುವ ಮುನ್ನ ನಾಗನ ಸ್ಥಾನಗಳ ಹಾಗು ಅವುಗಳ ಚಲನ ವಲನಗಳ ಬಗ್ಗೆ ಯೋಚಿಸಿ ಪರಾಮರ್ಶಿಸಿ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ' ಎಂಬೆಲ್ಲಾ ವಿಷಯಗಳು ತಿಳಿದವು. ಇಲ್ಲವಾದರೆ ಉಪದ್ರಗಳು ಹೆಚ್ಚಾಗಿ ತೋಡಿದ ನೀರಿನ ಬಾವಿಯನ್ನು ಉಪಯೋಗಿಸಲೂ ಆಗದೆ ಬೇರೊಂದು ಜಾಗದಲ್ಲಿ ತೋಡಿದ ನಿದರ್ಶನಗಳೂ ಇವೆ. ಹಾಗೆಯೇ  ಮಲೆನಾಡಿನಲ್ಲಿ ನಾಗನ ಬನಗಳೂ ಸಹ ಹೆಚ್ಚಾಗಿ ಕಾಣಲು ಸಿಗುತ್ತದೆ. ಇನ್ನು ನಾಗನ ಬಗ್ಗೆ ಚರ್ಚೆ ನಡೆಯುವಾಗ 'ನಾಗಮಣಿಯ' ಪ್ರಸ್ತಾಪವಾಗದೆ ಇರುತ್ತದೆಯೇ? ನಾಗಮಣಿಯನ್ನು ಪ್ರತ್ಯಕ್ಷವಾಗಿ ನೋಡಿದವರು ಯಾರೋ? ತಿಳಿಯದು ಆದರೆ ಅಂತೆ ಕಂತೆಗಳ ಸಂತೆಯನ್ನಾಧರಿಸಿ ಅವರವರ ಬುದ್ದಿಗೆ ತೋಚಿದ ರೀತಿ ಅವರಿಗೆ ತಿಳಿದ ರೀತಿ ಹೇಳುವ ಕಥೆಗಳಿಗೇನು ಕಡಿಮೆ ಇಲ್ಲವಲ್ಲ! ಅಂಥಹುದೇ ಕಥೆಯೊಂದು ಇಲ್ಲೂ ಕೇಳಲು ಸಿಕ್ಕಿತು. 

ನಾಗ ದೇವತೆಯ ಶಿರೋಮಣಿಯೇ ಈ ನಾಗಮಣಿ. ಶಿರದಿಂದ ನಾಗಮಣಿಯು ಬೇರ್ಪಟ್ಟಾಗ ಆ ಮಣಿಯ ಸುತ್ತ ನಡೆಯುವ ಮನಮೋಹಕವಾದ ನಾಗನ ನರ್ತನದ ಕಥೆಗಳು ಸರ್ವೇ ಸಾಮಾನ್ಯವಾಗಿ ಕೇಳಿ ಬರುತ್ತದೆ. ಅದೊಂದು ಪ್ರಜ್ವಲಿಸುವ, ತನ್ನ ಒಡಲಿನಲ್ಲಿ ಅಗಾಧವಾದ ಶಕ್ತಿಯನ್ನು ತುಂಬಿಟ್ಟುಕೊಂಡಿರುವ, ಬಹು ಅಮೂಲ್ಯವಾದ ಕಲ್ಲು. 'ಮನುಷ್ಯನಿಗೆ ಆಸೆ ಸಹಜ, ಹಾಗೆಂದ ಮಾತ್ರಕ್ಕೆ ದುರಾಸೆ ಸಲ್ಲ!' ವಾಮಮಾರ್ಗದಿಂದ ಆ ಮಣಿಯನ್ನು ಪಡೆದುಕೊಂಡ ದುರಾಚಾರಿಯ, ತನ್ನ ಜೀವನದಲ್ಲಿ ಭಯಾನಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಎಂಬ ಮಾತು ಸಹ ಎಚ್ಚರಿಕೆಯ ರೂಪದಲ್ಲಿ ಕೇಳ ಬಂದಿತು. 
      "ಊಟಕ್ಕೆ ಹೊತ್ತಾಯಿತು ಏಳಿ ಎಲ್ಲ" ಎಂಬ ಕರೆ ತುಸು ಆಜ್ಞೆಯಂತೆಯೇ ಇದ್ದುದರಿಂದ ತಡಮಾಡದೆ ಎಲ್ಲರೂ ಎದ್ದೆವು. ಅತ್ತ ಎಲ್ಲರೂ ಊಟದ ಒಳ ಹೊಕ್ಕೊಡನೆ ಇತ್ತ ನಾನು ಹಿತ್ತಲ ಬಾಗಿಲಿಂದ ಕೊಟ್ಟಿಗೆಯ ಪಕ್ಕದಲ್ಲಿರುವ ಹುಲ್ಕುತ್ರೆ ಯ ಕಡೆ ಹೀಗೆ ಹೋಗಿ ಹಾಗೆ ವಾಪಾಸಾದೆ.

 "ಉಟ್ಟಕ್ಕೆ ಕುಳಿತಾಗ ಯಾರು ಮಾತನಾಡಬಾರದು" ಎಂಬ ಮಾವನ ಆದೇಶವನ್ನು ಮೀರಿ ಯಾರು ಬಾಯಿ ಬಿಡಲಿಲ್ಲ. ಭೋಜನ ಪೂರೈಸಿ ಕೈ ತೊಳೆದು ಕೊಳ್ಳಲು ಒಬ್ಬಬ್ಬರಾಗಿಯೇ, ಹಿತ್ತಲ ಕಡೆ ಕೊಟ್ಟಿಗೆಯ ಬುಡದಲ್ಲಿದ್ದ ಬಾನಿಯ ನೀರಿಗೆ ಚಂಬನ್ನು ಹಾಕಿದರು. ಹಾಗಿರುವಾಗ ನನ್ನ ಕಸಿನ್, "ಅದೇನದು ಹುಲ್ಕುತ್ರೆಯೊಳಗಿಂದ ಬೆಳ್ಕ ಬರ್ತಿದೆ?" ಅಂದಳು ಆಶ್ಚರ್ಯದಿಂದ! ಮರುಘಳಿಗೆಯೇ ಅಲ್ಲಿ ಮನೆಯವರೆಲ್ಲರೂ ಜಮಾಯಿಸಿದರು. ಸುತ್ತಲೂ ಕಗ್ಗತ್ತಲು. ಅಲ್ಲಿ ಉರಿಯುತ್ತಿದ್ದಿದು ಕೊಟ್ಟಿಗೆಯ ದೀಪ ಮಾತ್ರ! ಕತ್ತಲಿನಲ್ಲಿ ಆ ಬೆಳಕು ಮತ್ತೂ ಪ್ರಖರವಾಗಿ ಹೊರ ಚಿಮ್ಮುತ್ತಿದ್ದುದ ನೋಡಿ ಮಾವ, " ಎದು ನಾಗಮಣಿ ಇರ್ಬೋದಾ?!" ಎಂದರು ಏನನ್ನೋ ಆಲೋಚಿಸಿ.

 ಈಗ ತಾನೇ ನಾಗಮಣಿಯ ಕಥೆಯನ್ನು ಕೇಳಿದ ಎಲ್ಲರಿಗೂ ಅದು ನಾಗಮಣಿಯೇ ಎಂಬ ನಂಬಿಕೆ ಬಲವಾಯಿತು. ಇದಕ್ಕೆ ಪುಷ್ಟಿಕೊಡುವಂತೆ ಮೊನ್ನೆ ತಾನೇ ಹುಲ್ಕುತ್ರೆಯೊಳಗಿನಿಂದ ನಾಗರಹಾವು ಹೋಗುವುದನ್ನು ಲಪ್ಪಿ ನೋಡಿದ್ದಳು. ಎಲ್ಲರ ಮುಖದಲ್ಲೂ ಶತಮಾನದಲ್ಲಿ ಯಾರು ಕಾಣದ ಶಮಂತಕ ಮಣಿಯನ್ನು ನೋಡಲಿರುವ ನಾವೇ ಭಾಗ್ಯವಂತರು ಎಂಬ ಹೆಮ್ಮೆಯು ಎದ್ದು ಕಾಣುತ್ತಿತ್ತು. ಇದರ ಮಧ್ಯೆ ನಾನು ನನ್ನ ವಾದ ಪ್ರಾರಂಭಿಸಿದೆ, ನಾಗಮಣಿ ಎಂಬುದು ಅವರು ಇವರು ಹುಟ್ಟಿಸಿದ ಹಬ್ಬಿಸಿದ ಕಟ್ಟು ಕಥೆ. ಒಂದುವೇಳೆ ಅದು ನಿಜವೇ ಆಗಿದ್ದರೆ ದಿನಪತ್ರಿಕೆಯಲ್ಲೋ ಅಥವಾ ನ್ಯೂಸ್ ನಲ್ಲಿ ಯಾರಾದರೂ ಸುದ್ದಿ ಮಾಡುತ್ತಿದ್ದರು, ನಾನು ಈಗಲೇ ಹೋಗಿ ಅದೇನು ನೋಡಿ ಬರುತ್ತೇನೆ ಎಂದು ಹುಲ್ಕುತ್ರೆಯ ಬಳಿ ನಡೆದೆ. ಎಲ್ಲರೂ ಹಿಂದಿನಿಂದ ಅಯ್ಯೋ, ಬೇಡ್ವೇ ಹೋಗ್ಬೇಡ! ನಾಗ್ರಹಾವೆ ಇದ್ರೆ? ಎನ್ಮಾಡ್ತ್ಯೆ? ಎಂದು ಕಿರಿಚ ತೊಡಗಿದರು. ನನ್ನ ಅಮ್ಮನೋ ಅವಳಿಗೆ ಬರುವ ಸಮಸ್ತ ಮಂತ್ರಾದಿಗಳನ್ನು ಪಠಿಸತೊಡಗಿದಳು. "ಅಂತ್ಯಕಾಲೇ ವಿಪರೀತ ಬುದ್ದಿಹೀ!?"...... 
       ಯಾರ ಮಾತಿಗೂ ಕಿವಿಗೊಡದೆ ನೇರವಾಗಿ ಹುಲ್ಕುತ್ರೆ ಬಳಿ ಹೋಗಿ ಮನಸ್ಸಿನಲ್ಲಿ ಒಂದು ಚೂರು ಗಾಬರಿಗೊಳ್ಳದೆ ಧೈರ್ಯದಿಂದ ಬಲಗೈಯನ್ನು ಹುಲ್ಲಿನ ಒಳಕ್ಕೆ ಹಾಕಿ ಆ ಬೆಳಕಿಗೆ ಕಾರಣವಾದ ಆ ಅಮೂಲ್ಯ ವಸ್ತುವನ್ನು ಕೈಯಲ್ಲಿ ಹಿಡಿದೆತ್ತಿ ತೋರಿಸಲು..... ಎಲ್ಲರ ಕಣ್ಣು ಹೊಟ್ಟಿ ಹೋಯಿತು, ಕೆಲವರ ಮುಖದಲ್ಲಿ ಭಾವನೆಗಳೇ ಮಾಯವಾದವು, ಕೆಲವರ ಮುಖ ಕೋಪದಿಂದ ಕಪ್ಪು ಕಟ್ಟಿತು, ನನ್ನಂತವರು ಗೊಳ್ ಎಂದು ಬಿದ್ದು ಬಿದ್ದು ನಗಲು ಶುರುಮಾಡಿದರು! ಹೌದು, ನಾನು ಧೈರ್ಯದಿಂದ ಹಿಡಿದೆತ್ತಿದ ವಸ್ತು ಬೇರ್ಯಾವುದೂ ಅಲ್ಲ ಊಟಕ್ಕೆ ಮೊದಲು ಯಾರಿಗೂ ತಿಳಿಯದ ಹಾಗೆ ಹುಲ್ಕುತ್ರೆಯಲ್ಲಿ ಅಡಗಿಸಿ ಬಂದ ಲೈಟ್ ಟಾರ್ಚ್ !!

Comments

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "