"ಕೊಪ್ಪರಿಗೆಯ ಬೆಲ್ಲ" (8) - ಮಹಾ ಪಲಾಯನ!
ಮಹಾ ಪಲಾಯನ!
ಅನತಿ ದೂರದಲ್ಲಿ ಯಾರದೋ 'ಹೆಜ್ಜೆ' ಗುರುತು ಕೇಳಲು, ನಮ್ಮ ಮನಸ್ಸಿನಲ್ಲಿ ಮೂಡಿದ ಭಯಾನಕ ಕಲ್ಪನೆಗಳು ಹುಚ್ಚೆದ್ದು ನಮ್ಮನ್ನು ಹೆದರಿಸಿದ್ದವು!. ನಾವು ನೋಡಿದ ಹೆಜ್ಜೆ ಗುರುತಿನಿಂದ, "ಹುಲಿಯೇ ಎದ್ದು ಬಂದರೆ? ಏನು ಗತಿ!" ಎಂಬ ದಿಗಿಲು ಹುಟ್ಟಿತು. ಹಾಗು ಹೀಗೂ ಕೊಂಚ ಧೈರ್ಯವನ್ನು ಬಾಚಿಕೊಂಡು ಮೂವರೂ ಹತ್ತಿರ ಹತ್ತಿರ ನಿಂತೆವು. "ಬರ್ತ್ಯನೋ? ಬಾ!" ಎಂಬ ಕಿಚ್ಚು ನಮ್ಮ ಪುಕ್ಕಲು ಮನಸ್ಸಿನಲ್ಲಿ ಆ ವನದೇವತೆಯೇ ಹಚ್ಚಿದಂತ್ತಿತ್ತು. ಅಷ್ಟರಲ್ಲಿ ಆ ಹೆಜ್ಜೆ ಸಪ್ಪಳ ಮನುಷ್ಯಾಕೃತಿಯನ್ನು ತಾಳುವುದ ನೋಡಿ ಸ್ವಲ್ಪ ಮನಸ್ಸಿಗೆ ನಿರಾಳವಾದರೂ, ಯಾರಿರಬಹುದು? ಎಂಬ ಸಂಶಯವೂ ಜೊತೆಗೆ ಕಾಡಿತ್ತು.
ಪಂಚೆ ಎತ್ತಿಕಟ್ಟಿಕೊಳ್ಳುತ್ತಾ ಬರುತ್ತಿದ್ದ ಚಿಕ್ ಮಾವನನ್ನು ನೋಡಿ ಆದ ಸಂತೋಷ ಯಾವತ್ತಿಗೂ ಯಾರನ್ನು ನೋಡಿ ಆಗಿರಲಿಲ್ಲ. ನಮ್ಮ ಬಳಿ ಬಂದ ಮಾವನ ದೃಷ್ಟಿ ಆ ಹೆಜ್ಜೆ ಗುರುತಿನತ್ತ ಬೀಳದೇ ಇರಲಿಲ್ಲ. "ಹೌದು! ಹುಲಿಯದ್ದೇ ಹೆಜ್ಜೆ!" ಮುಖದಲ್ಲಿ ಯಾವ ಭಾವನೆಯನ್ನೂ ತೋರದೆ, "ಬನ್ನಿ ಮಕ್ಕಳೇ ಹೊತ್ತಾಯಿತು ಹೋಗಣ" ಎಂದು ನಮ್ಮನ್ನು ಮುನ್ನೆಡಿಸಿದರು.
ಯಾರೊಬ್ಬರೂ ಮಾತಾಡಲಿಲ್ಲ. ಎಲ್ಲರಿಗೂ 'ಅಂಬಿಯ' ಕಥೆ ಏನಾಯಿತು ಎಂಬುದು ತಿಳಿದಿತ್ತು. ಸಧ್ಯದ ನಮ್ಮ ಪರಿಸ್ಥಿತಿಯಲ್ಲಿ 'ಅಂಬಿಯ' ಗತಿ ನಮಗೂ ಆಗಬಾರದೆಂಬುದೇ ನಮ್ಮೆಲ್ಲರ ಮನೋಕಾಮನೆಗಳಾಗಿದ್ದವು. ಕಣ್ಣಿಗೆ ಕಟ್ಟಿದಂತಿದ್ದ ಆ 'ಹುಲಿಯ ಹೆಜ್ಜೆ' ಗುರುತು ನಮ್ಮನ್ನು ಮಂಕು ಹಿಡಿದಂತೆ ಮಾಡಿದರೂ ಸಹ ನಮ್ಮ ದಿಟ್ಟ ಹೆಜ್ಜೆಗಳು ತೋರಿಕೆಯ ಧೈರ್ಯವನ್ನು ಪ್ರದರ್ಶಿಸುತ್ತಿದ್ದವು.
ಇಳಿಜಾರಲ್ಲಿ ಇಳಿದು ಬಂದಷ್ಟು ಸುಲಭವಾಗಿ ಹತ್ತಿ ಹೋಗಲು ಆಗಲಿಲ್ಲ ಹಾಗೂ ಯಾವ ಕಡೆ ಇಂದ ಇಳಿದಿದ್ದೆವು? ಎಂಬ ಕುರುಹ ಕಾಣದೆ ಹೋಯಿತು. ನಾವೂ ಇಳಿಜಾರಿನಲ್ಲಿ ಜಾರುವಾಗ ಹಿಡಿದು ಮುರಿದ ಗಿಡ ಬಳ್ಳಿಗಳು ಮುಸುಕಿನಲ್ಲಿ ತೋರದೆ ಹೋದವು. ಇಳಿಜಾರು ಹತ್ತಿ ಎಡಕ್ಕೆ ಹೋಗಬೇಕೆಂಬುದು ತಿಳಿದಿತ್ತು ಆದರೆ, ಅರೆ ಬಯಲಿನಿಂದ ಕಾಡಿನ ಒಳಗೆ ಹೊಕ್ಕ ನಮಗೆ ಯಾವುದು ಎಡ? ಯಾವುದು ಬಲ? ತಿಳಿಯಲಿಲ್ಲ. ಸುತ್ತಿ ಸುತ್ತಿ ಬಂದಲ್ಲಿಗೇ ಬರುತ್ತಿದ್ದೇವೆ ಎಂದೆನಿಸಿ ಮುಖ ಕಪ್ಪುಗಟ್ಟಲು ಶುರುವಾಯಿತು. ನಾವು ಮೂವರು "ದೊಡ್ಡ ಜನರೆಂದು" ಹೇಳಿಕೊಂಡಿದ್ದರೂ ನಮ್ಮ ಸತ್ಯ ನಮಗೂ ಹಾಗೂ ಮಾವನಿಗೂ ಅರಿವಿತ್ತು. ಕಾಡಿನ ಒಳಗೆ ಹಗಲು ಹಾಗು ಇರುಳಿಗೆ ಹೆಚ್ಚು ಬೇಧವಿಲ್ಲವಾದರೂ ಮನುಷ್ಯನ ಮನಸ್ಸು ಹಗಲು ಮತ್ತು ಇರುಳುಗಳಿಗೆ ಪ್ರತಿಕ್ರಿಯಿಸುವ ರೀತಿಯೇ ಬೇರೆಯಾಗಿರುತ್ತದೆ. ಹಗಲು ಕಂಡ ಕನಸಿಗೂ ಹಾಗು ಇರುಳಿನಲ್ಲಿ ಕಂಡ ಅದೇ ಕನಸಿಗೂ ಅಜಗಜಾಂತರ ವ್ಯತ್ಯಾಸ!
ಯಾವಾಗ ಮನಸ್ಸಿಗೆ ಭಯವೆಂಬ ಭೂತ ಹಿಡಿಯುತ್ತದೆಯೋ ಅದು ಎಷ್ಟೇ ಬುದ್ದಿವಂತ ತಲೆಯಾದರೂ ಯೋಚನಾಶಕ್ತಿಯನ್ನು ತಟಸ್ಥವಾಗಿಸಿಬಿಡುತ್ತದೆ. ಅಂತಹ ವಿಷಮ ಪರಿಸ್ಥಿತಿಯಲ್ಲಿ ಬೇರೆಯವರು ಕೊಟ್ಟ ಸಲಹೆ ಏನೀ ಆಗಲಿ ಅದನ್ನು ಕುಲಂಕುಷವಾಗಿ ಪರಿಶೀಲಿಸದೆಯೇ ಕಾರ್ಯಗತ ಮಾಡುವ ಸಂಭವ ಇರುತ್ತದೆ. ನೋಡಿ, ನಮ್ಮ ಹಣೆ ಬರಹ ಒಂದು ಚೆನ್ನಾಗಿದ್ದರೆ! "ಹುಲಿಯ ಬಾಯಿಂದಲೂ ತಪ್ಪಿಸಿಕೊಂಡು ಬರಬಹುದು!".
ಒಂದು ಕ್ಷಣ ಅಲ್ಲೇ ನಿಂತು ಯೋಚಿಸತೊಡಗಿದೆವು. "ಹೇಗೆ ವ್ಯರ್ಥವಾಗಿ ಅಲೆಯುವುದರಲ್ಲಿ ಪ್ರಯೋಜನವಿಲ್ಲ, ನಾವು ನೀರಿನ ದಡಕ್ಕೆ ಮತ್ತೆ ಹೋಗೋಣ ಅದು ಅರೆ ಬಯಲು ಪ್ರದೇಶವಾದ್ದರಿಂದ ದಾರಿ ಕಾಣುವಷ್ಟು ಬೆಳಕಿರುತ್ತದೆ. ನೀರಿನ ದಡದಲ್ಲೇ ಆದಷ್ಟು ದೂರ ಕ್ರಮಿಸಿ ನಂತರ ಇಳಿಜಾರು ಹತ್ತಿ ಎಡಕ್ಕೆ ಹೋದರೆ ಬ್ಯಾಣದ ದಾರಿ ಸಿಗಬಹುದು" ಎಂದು ನನ್ನ ತಂಗಿ ಸಲಹೆ ಕೊಟ್ಟಳು. 'ಮುರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು'. ನನ್ನ ತಂಗಿಗೆ ಏಕಾಗ್ರತೆ ಹೆಚ್ಚು. ತಾನಿರುವ ಪರಿಸರವನ್ನು ಸೂಕ್ಷ್ಮರೀತಿಯಲ್ಲಿ ಅವಲೋಕಿಸುತ್ತಿದ್ದಳು. ಅದರಂತೆ ಆ 'ಛೋಟಾ ಮೆಣಸಿನ್ಕಾಯಿ' ಸಲಹೆಯನ್ನು ಸಮರ್ಥಿಸಿ ಎಲ್ಲರೂ ಮುಳುಗಡೆ ನೀರಿನ ಬಳಿ ಬಂದೆವು. ದಡಕ್ಕೆ ಹತ್ತಿರದಲ್ಲೇ ನಡೆಯುತ್ತಾ ಹೋದೆವು. ಕಾಲು ಅಲ್ಲಲ್ಲಿ ಭಾರಿ ಹುಗಿಯುತ್ತಿತ್ತು!. ಹುಗಿದರೆ ಭಯವಿಲ್ಲ ಜಾರಿದರೆ ಕಷ್ಟ! ಸ್ವಲ್ಪ ಆಯತಪ್ಪಿದರೂ ಮುಳುಗಡೆ ನೀರಿಗೆ ಬೀಳುವ ಭಯ. ಆ ನೀರಿನ ಆಳ ಬಲ್ಲವರಾರು? ಹಾಗು ನೀರಿನಲ್ಲಿ ವಿಷಯುಕ್ತ ಹಾವು, ಮೊಸಳೆಗಳು ಇನ್ನು ಏನೇನಿವೆಯೋ! ಬಹಳ ದೂರ ಹಾಗೆ ದಡದಲ್ಲಿ ಹೋಗಲಾಗಲಿಲ್ಲ ಮುಂದೆ ಸಿಕ್ಕ ಕೊರಕಲು ದಾಟಲು ಕಷ್ಟ ಸಾಧ್ಯವೆಂದೆನಿಸಿ ಅಲ್ಲಿಂದ ಇಳಿಜಾರು ಹತ್ತಲು ಹೊರಟೆವು. ಹತ್ತುವುದು ಇಳಿಯುವುದಕ್ಕಿಂತ ಸ್ವಲ್ಪ ಸುಲಭವಾಯಿತಾದರೂ ಹಿಂದಕ್ಕೆ ಜಾರಿದರೆ ನೀರಿಗೆ ಬೀಳುವ ಭಯವಿತ್ತು. ಹಾಗೂ ಹೀಗೂ ಮೇಲಕ್ಕೆ ಬಂದು ಎಡಕ್ಕೆ ತಿರುಗಿ ಮುಂದೆ ನಡೆದೆವು.
ಹಿಂದೆ ತಿರುಗಿ ನೋಡದೆ, ಕಾಲ ಬಳಿ ಏನಿದೆಯೋ ಲೆಕ್ಕಿಸದೆ ಮುಂದೆ ಮುಂದೆ ಹೆಜ್ಜೆ ಹಾಕುತ್ತಾ ಹೋದ ನಮಗೆ ಸ್ವಲ್ಪ ದೂರದಲ್ಲೇ ಕಾಡು ಕ್ರಮಿಸಿ ಕುರುಚಲು ಗಿಡಗಳ ದರ್ಶನವಾದವು. ದೇಹದ ವಿಶ್ರಾಂತಿಗಿಂತಲೂ, ಮನಸ್ಸಿನ ವಿಶ್ರಾಂತಿ ಮುಖ್ಯವೆಂದು ಏದುಸಿರು ಬಿಡುತ್ತಾ ಬ್ಯಾಣದ ನೇರಳೆ ಮರದ ಬಳಿ ಬರಲು ಒಮ್ಮೆ ಹಿಂದೆ ತಿರುಗಿ ನೋಡಿದೆ. ಆಗ ಕಾವಲುಗಾರನಂತೆ ಕಂಡ 'ಬಾಳೆ ಗುಡ್ಡ' ಈಗ ನನ್ನ ಮನಸ್ಸಿನಲ್ಲಿ 'ರಾಕ್ಷಸನ ರೂಪ' ತಾಳಿತ್ತು.
"ಅಂತೂ ಇಂತೂ ಪಾರಾದ್ವಿ! ಬೇಗ ಮನೆ ಸೇರ್ಕೋಬೇಕು" ಎಂದು ಸುಬ್ಬು ಅಲ್ಲಿಂದ ಅವನ ಕೂಗಳತೆ ದೂರದ ಮನೆಗೆ ಕಾಲುದಾರಿ ಹಿಡಿದ. ನಮ್ಮಿಬ್ಬರನ್ನು, ಮಾವ ಮನೆಯ ಬಳಿ ಬಿಟ್ಟು ನಾವು ಊನ್ಗೋಲು ದಾಟಿ ಹೋಗುವುದನ್ನು ನೋಡಿ ಅವರೂ ತಮ್ಮ ಮನೆಯ ಕಡೆ ಹೆಜ್ಜೆ ಹಾಕಿದರು.
Comments
Post a Comment