"ಕೊಪ್ಪರಿಗೆಯ ಬೆಲ್ಲ" (9) - ಮಧ್ಯರಾತ್ರಿಯ ಮಂತ್ರ ಭೋದನೆ!

                          ಮಧ್ಯರಾತ್ರಿಯ ಮಂತ್ರ ಬೋಧನೆ !!

      ಜೀವ ಕೈಯಲ್ಲಿ ಹಿಡಿದು ಮನೆಯ ಅಂಗಳಕ್ಕೆ ಬಂದ ನಮಗೆ ಚಿಂತಾಕ್ರಾಂತವಾದ ಅಮ್ಮನ ಮುಖ ಕಾಣಿಸಿತು. ಸೂರ್ಯಾಸ್ಥ ನೋಡಿ ಬರುತ್ತೇವೆ ಎಂದು ಹೋದವರು ಹೊತ್ತಾದರೂ ಬರದೇ ಇರಲು ಲಪ್ಪಿ ಆಚೆ ಮನೆಗೆ ಹೋಗಿ ಸುಬ್ಬ ಬಂದಿದ್ದಾನೆಯೇ? ಎಂದು ವಿಚಾರಿಸಿಕೊಂಡು ಬಂದಿದ್ದಳು. ಇನ್ನೇನು ಅವರೇ ಬ್ಯಾಣದ ಬಳಿ ನಮ್ಮನ್ನು ಹುಡುಕಲು  ಹೊರಡುವರಿದ್ದರು ಅಷ್ಟರಲ್ಲಿ ನಾವಿಬ್ಬರು ನಿತ್ರಾಣರಾಗಿ ಮನೆಗೆ ಬಂದು ಜಗಲಿಯ ಮೇಲೆ ಉರುಳಿದೆವು. ನಮ್ಮ ಸ್ಥಿತಿ ಎಲ್ಲರನ್ನೂ ಗಾಬರಿಗೊಳಿಸದೆ ಇರಲಿಲ್ಲ. ಅತ್ತೆ, ಅಡುಗೆ ಮನೆ ಇಂದ ಬಿಸಿ ಬಿಸಿ ಹಾಲನ್ನು ಕುಡಿಯಲು ತಂದರು. ಅಮ್ಮ ನಮ್ಮಿಬ್ಬರಿಗೆ ಮೊದಲು ಕೊಡಪಾನದ ತಣ್ಣನೆಯ ನೀರನ್ನು ಕುಡಿಸಿ ನಂತರ ಅತ್ತೆ ತಂದ ಹಾಲನ್ನು ಕೊಟ್ಟಳು. ಆಗ ನಮಗೆ ಮಾತನಾಡಲು ಚೇತನ ಬಂದದ್ದು. ಅಲ್ಲಿಯವರೆಗೂ ನಮ್ಮ ಸ್ಥಿತಿಯನ್ನು ನಾವೇ ಗಮನಿಸಿರಲಿಲ್ಲ. 
     ಇಂಬಳ ಕಚ್ಚಿ ಸುರಿದ ನೆತ್ತರಿನಲ್ಲಿ ನಮ್ಮಿಬ್ಬರ ಕಾಲಿನ ಬೆಳ್ಳಿ ಗೆಜ್ಜೆ ತೊಯ್ದು ಹೋಗಿತ್ತು. ಎಲ್ಲಾ ಆ ಹವಾಯ್ ಚಪ್ಪಲ್ ನ ಮಹಿಮೆ!, ಅಲ್ಲಲ್ಲಿ ತರಚಿದ ಗಾಯ, ಹರಿದ ಬಟ್ಟೆ, ಕೆದರಿ ಗಂಟಾದ ತಲೆಗೂದಲು, ಶೋಕಿಗೆ ಹಾಕಿದ ಕ್ಯಾಪ್ ಅದೆಲ್ಲೋ ಬಿದ್ದು ಹೋಗಿತ್ತು, ಹರಳೆಣ್ಣೆ ಕುಡಿದ ಮುಖ, ಕಾಂತಿ ಹೀನ ಕಣ್ಣುಗಳು, ನೆಟ್ಟಗೆ ಕೂರಲೂ ಬಲವಿಲ್ಲದೆ ಬಗ್ಗಿರುವ ಬೆನ್ನು, ದೇಹದೆಲ್ಲೆಡೆ ಎಣಗು ಕಚ್ಚಿ ಬಿಟ್ಟ ತುರಿಕೆ ಹಾಗು ಎಲ್ಲದಕ್ಕಿಂತ ಹೆಚ್ಚಾಗಿ ನಾವು ನೋಡಿದೆ ಹುಲಿಯ ಹೆಜ್ಜೆ! ನಮ್ಮ ಆ ದೀನಸ್ಥಿಥಿ ಅಯ್ಯೋ ಪಾಪ ಎಂಬುದಕ್ಕಿಂತ, "ನಿಮಗೆಲ್ಲ ಏನ್ ಮೆರ್ಸತ್ತಾ? ಯಾಕ್ ಬೇಕಿತ್ತು ಕಾಡ್ ಸುತ್ತೋ ಹುಚ್ಚು" ಎಂದು ಬಯ್ಯಲು ಯೋಗ್ಯವಾಗಿತ್ತು. ದೊಡ್ಡವರು ಬೈದು ಬಯ್ಯುತ್ತಾರೆ ಹಾಗೆಯೇ ಉಪಚಾರವನ್ನೂ ಮಾಡುತ್ತಾರೆ. ನಮ್ಮಿಬ್ಬರ ಕಾಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ಬಿಸಿ ಬಿಸಿ ಹಂಡೆ ಸ್ನಾನ ಮಾಡಿಕೊಂಡ ಬರುವಂತೆ ಹೇಳಿದರು. ಸ್ನಾನ ಮಾಡಿದ ನಮಗೆ ಹೋದ ಜೀವ ಬಂದಂತಾಯಿತು. 

ಎಣಗು ಕಚ್ಚಿದಲ್ಲೆಲ್ಲಾ ಅರಿಶಿನ ಕೊಬ್ಬರಿ ಎಣ್ಣೆ ಮಿಶ್ರಣ ಹಚ್ಚಿದರು. ಬಿಸಿ ಬಿಸಿ ಉಪ್ಪು ತುಪ್ಪದ ಅನ್ನ ತಿನ್ನಿಸಿದರು. ಕಾಲಿಗೆ ಕೊಬ್ಬರಿ ಎಣ್ಣೆ ಹಚ್ಚಿ ತಿಕ್ಕುತ್ತಾ ನಮ್ಮ ಅಮ್ಮ, "ನೀವು ಮೂವರು ಮತ್ತು ಚಿಕ್ ಅಣ್ಣ ಬ್ಯಾಣ ಇಳಿದು ಮುಳುಗಡೆ ನೀರಿನ ಕಡೆ ಹೋಗುವುದನ್ನು 'ಭೋಜ' ನೋಡಿದ್ದು ಇಲ್ಲಿ ಕೊಟ್ಟಿಗೆಯ ಮಾಡು ಸರಿ ಮಾಡಲು ಬಂದವ ಹೇಳಿದ" ಎಂದಳು. 

ಆಕೆಗೆ ಮೊದಲೇ ವಿಷಯ ತಿಳಿದದ್ದು ನಮಗೆ ಸಮಾಧಾನವಾಯಿತು. "ಹೇಗೂ ನಮಗೆ ದಣಿವಾಗಿದೆ ಯಾರೂ ನಮ್ಮನ್ನು ಹೆಚ್ಚು ಪ್ರಶ್ನೆ ಮಾಡಿವುದಿಲ್ಲ" ಎಂದು ಸುಮ್ಮನೆ ಪಾಪದ ಮುಖ ಮಾಡಿಕೊಂಡು ಹಾಸಿಗೆಯ ಮೇಲೆ ಮಲಗಿದೆವು. ಕಣ್ಣು ಮುಚ್ಚಿದ ಕೂಡಲೇ ನಿದ್ದೆ ಹತ್ತಿತು.
     "ಅದೊಂದು ಸುಂದರ ಮುಸ್ಸಂಜೆ. ನಾನು, ನನ್ನ ತಂಗಿ ಹಾಗೂ ನನ್ನ ಅಮ್ಮನೊಡನೆ 'ಬಾಳೆ ಗುಡ್ಡದ' ತುತ್ತ ತುದಿಯಲ್ಲಿ ಕುಳಿತು ಸೂರ್ಯಾಸ್ಥದ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳುತ್ತಿದ್ದೆ. 

ಕಿತ್ತಳೆ ಬಣ್ಣದ ಸೂರ್ಯ ರಶ್ಮಿ, ಶರಾವತಿ ನದಿಯ ಹಿನ್ನೀರಿನ ನರ್ತನಕ್ಕೆ ಬೆಳಕು ಚೆಲ್ಲಿದಂತೆ ಹಿತವಾಗಿ ಬೀಳುತ್ತಿತ್ತು. ಅದೊಂದು ಬೀಳ್ಕೊಡುಗೆ ಸಮಾರಂಭದ ಹಾಗೆ ನನಗೆ ಗೋಚರಿಸಿತು. ನಾನು ನಿಂತಲ್ಲಿಯೇ ನಿನಗಾಗಿ ಕಾಯುತ್ತೇನೆ ನೇ ಹೋಗಿ ಬಾ ಎಂದು ಶರಾವತಿಯು ಆ ದಿನಕರನಿಗೆ ಹೇಳಿದಂತಿತ್ತು. ಅಕೇಶಿಯಾ ಮರದ ಬೀಸುಬಿಕೆ ಚಪ್ಪಾಳೆ ಹೊಡೆದಂತಿರಲು. ಸುತ್ತಲ್ಲೂ ಮಬ್ಬು ಹಗುರವಾಗಿ ಪಸರಿಸಲು ಶುರುವಾಯಿತು. ಪೂರ್ವದಿಂದ ಪಶ್ಚಿಮದ ಕಡೆ ಆ ಸೌಂದರ್ಯವನ್ನು ಸವಿಯುತ್ತಾ ಒಂದು ಸಾರಿ ತಿರುಗಿ ನೋಡಲು ಪಕ್ಕದಲ್ಲಿ ಅಮ್ಮ ಮತ್ತು ತಂಗಿ ಇಲ್ಲ! ನಾನು ಸೂರ್ಯಾಸ್ಥ ನೋಡುತ್ತಾ ಮೈ ಮರೆತಾಗ ಇಲ್ಲೇ ಎಲ್ಲೊ ಗಿಡ ಗಂಟಿಯ ಹಿಂದೆ ಅವಿತು ಕೂತಿರಬಹುದು ಎಂದು ಹುಡುಕಲು ಶುರುಮಾಡಿದೆ. ಎಷ್ಟು ಹುಡುಕಿದರೂ ಅವರಿಬ್ಬರ ಸುಳಿವಿಲ್ಲ! ಜೋರಾಗಿ ಕೂಗು ಹಾಕಿದೆ ನನ್ನ ಕೂಗು ನನಗೆ ಪ್ರತಿಧ್ವನಿಸುತ್ತಿದೆ ಬಿಟ್ಟರೆ ಅವರಿಬ್ಬರ ಪ್ರತಿಕ್ರಿಯೆ ಇಲ್ಲ! ಮತ್ತೊಮ್ಮೆ ಕೂಗು ಹಾಕಲು ನನ್ನ ಗಂಟಲು ಗದ್ಗದಿತವಾಯಿತು. ಕಣ್ಣಿನಿಂದ ಅಶ್ರುಧಾರೆಯಾಯಿತು. ಹಾಗೆ ಹುಡುಕುತ್ತಾ ಹುಡುಕುತ್ತಾ ನನಗೇ ತಿಳಿಯದೆ ದಟ್ಟ ಕಾಡಿನ ಮಧ್ಯೆ ಕಳೆದು ಹೋದೆ. ಅದೇನು ಶಬ್ದ? ಆಗೂ, ಆ ಪೊದೆಯ ಹಿಂದೆ! ಒಂದು ಕಾಲು ಹಿಂದೆ ಇಡುತ್ತಲೇ ಹತ್ತಿರಹೋದ ನನಗೆ ವರುಣಾಘಾತವೇ ಕಾದಿತ್ತು. ಆಳೆತ್ತರದ ಕೊಬ್ಬಿದ ಹುಲಿ! ಅದರ ಚಿತ್ತ ನನ್ನತ್ತ! ನನಗೆ ದಿಕ್ಕೇತೋಚದಂತಾಗಿ ತಿರುಗಿ ಓಡಲು, ನೆಲದ ಬಳ್ಳಿ ಕಾಲಿಗೆ ಸಿಕ್ಕು ಕೌನ್ಚಿ ಬಿದ್ದೆ. ಅಯ್ಯೋ ! ನನ್ನ ಬಳಿ ನುಗ್ಗೇ ಬಿಟ್ಟಿತು, ನನ್ನ ಮೇಲೆ ಎರಗೇ ಬಿಟ್ಟಿತು ಹುಲಿ! ಹುಲಿ! ಹುಲಿ!"  

      ಎಂದು ಜೋರಾಗಿ ಕಿರುಚಿ ಕಣ್ಣು ಹೊಟ್ಟಿದಾಗ ನನ್ನ ಸುತ್ತ ಅಮ್ಮ, ಅತ್ತೆ ಹಾಗು ಮಾವ, "ಎಂತ ಆಯಿತು? ನೀ ಮನೇಲಿದ್ಯಾ ಮಗ ಹೆದ್ರುಕೋಬೇಡ. ನೋಡು ನಾವೆಲ್ಲ ಇಲ್ಲೇ ಇದೀವಿ!" ಎಂದು ನನ್ನನ್ನು ಸಮಾಧಾನ ಮಾಡಿದರು. ನನ್ನ ಮೈ ಬಿಸಿ ಆಗಿತ್ತು, ಕಣ್ಣು ಕೆಂಪಾಗಿದ್ದವು, ತಲೆ ನೋಯುತ್ತಿತ್ತು. ಅತ್ತೆ, "ಏನನ್ನೋ ನೋಡಿ ಹೆದ್ರಿದಾಳೆ, ಜ್ವರ ಬೇರೆ ಬಂದಿದೆ! ಒದ್ದೆ ಬಟ್ಟೆ ಹಣೆ ಮೇಲೆ ಇಡು" ಎಂದರು. ತಕ್ಷಣ ಮಾವ ದೇವರ ಮನೆ ಇಂದ ವಿಭೂತಿಯನ್ನು ತಂದು ಹಣೆಗೆ ಹಚ್ಚಿ, "ನರಸಿಂಹನ ಮಂತ್ರ ಹೇಳಿ ಮಲ್ಕೋ, ಭಯ ಹೋಗತ್ತೆ ಚೆನ್ನಾಗಿ ನಿದ್ದೆನು ಬರತ್ತೆ" ಎಂದು ಮಂತ್ರವನ್ನು ಭೋದಿಸಿದರು, 
                     || ಓಂ  ಉಗ್ರಂ  ವೀರಂ  ಮಹಾ-ವಿಷ್ಣುಮ್, ಜ್ವಲಂತಂ  ಸರ್ವಥಾ  ಮುಖಂ  
                     ನರಿಸಿಂಹಂ  ಭೀಷಣಂ  ಭದ್ರಂ, ಮ್ರಿತ್ಯು-ಮ್ರಿತ್ಯುಮ್  ನಮಾಮ್ಯಹಮ್ ||

Comments

  1. ಚೆನ್ನಾಗಿದೆ...

    ReplyDelete
  2. Replies
    1. ಹುಡುಗಿ ಪರವಾಗಿಲ್ಲ ತುಂಬಾ ಚೆನ್ನಾಗಿ ಬರೆದಿದ್ದೀಯ ನಮ್ಮ ಅನುಭವ ಕಣ್ಣಿಗೆ ಕಟ್ಟಿದ ಹಾಗೆ ಇದೆ.
      ಅದರಲ್ಲೂ ಇಂಬಳ ಈಗಲೂ ಮೈಜುಂ ಎನ್ನುತ್ತೆ

      Delete
  3. MA'AM SUPER BLOG FROM YOUR STUDENT DHRUV

    ReplyDelete

Post a Comment

Popular posts from this blog

"ಕೊಪ್ಪರಿಗೆಯ ಬೆಲ್ಲ" (11) - ಫಲ ಸಂತರ್ಪಣೆ!

We Create Awesome : "VAULT!"

" ONLINE EDUCATION SYSTEM "