"ಕೊಪ್ಪರಿಗೆಯ ಬೆಲ್ಲ" (7) - ಹೌದು ಹುಲಿಯ!
ಹೌದು ಹುಲಿಯಾ! ಮಾರನೆಯ ದಿವಸ ಮಧ್ಯಾಹ್ನ ಊಟದ ಸಮಯ ... ಎರಡು ತುತ್ತು ಹೆಚ್ಚಿಗೆ ತಿಂದು ಎದ್ದಿದ್ದೆ. ನಾನು ನನ್ನ ತಂಗಿ ಸುಬ್ಬುವಿನ ಬರುವಿಕೆಯನ್ನೇ ನೀರೀಕ್ಷಿಸುತ್ತಾ ಪಾಗಾರದ ಮೇಲೆ ಕೂತಿದ್ದೆವು. ಮೂಲೆಯಲ್ಲಿ ಲಪ್ಪಿ ಎಲೆ ಅಡಿಕೆ ಜಗಿಯುತ್ತಾ ವಿಶ್ರಾಂತಿ ಪಡೆಯುತ್ತಿದ್ದಳು. ಎಂದಿನಂತೆ ನಾನು ಅವಳ ಬಳಿ ಕೂತು ಹರಟೆ ಹೊಡಿಯಲು ಸಮಯವಿರಲಿಲ್ಲ ಹಾಗು ಸಂಯಮವೂ ಇರಲಿಲ್ಲ. ಅಷ್ಟರಲ್ಲಿ ಹರಿ ಹರಿ ಎಂದು ಸುಬ್ಬು ಪ್ರತ್ಯಕ್ಷವಾದನು. ನಾವು ಸುಬ್ಬುವಿನ ಜೊತೆ, ನೇರಳೆ ಮನೆ ಬ್ಯಾಣದ ಮೇಲಿರುವ ಬಾಳೆ ಗುಡ್ಡಕ್ಕೆ ಹೋಗಿ ಸೂರ್ಯಾಸ್ತ ನೋಡಿ ಬರುತ್ತೇವೆ ಎಂದು ಹೇಳಿ ಹಿಂದಿನ ದಿವಸ ತಾಯಿಯಿಂದ ಒಪ್ಪಿಗೆ ಪಡೆದಿದ್ದೆವು. ನಾವು ಊನ್ಗೋಲು ತಳ್ಳಿ ಹೋಗುವುದನ್ನೇ ನೋಡುತ್ತಾ ನಿಂತ ಲಪ್ಪಿ ಗಟ್ಟಿಯಾಗಿ, "ಹಾಗೆ ಊನ್ಗೋಲು ಸರ್ಸಿ ಹೊಯ್ನಿ ಜಾನ್ವಾರ್ ನುಗ್ತಾವ್ ಕಡಿಗೆ" ಎಂದಳು. ಗೋದಿ ಬಣ್ಣ ಕೋಲು ಮೈ ೪೫ ಅಂಗುಲ, ಎಣ್ಣೆಗೆಂಪು ಬಣ್ಣ ಸಾಧಾರಣ ಮೈಕಟ್ಟು ೬೦ ಅಂಗುಲ, ಶ್ವೇತವರ್ಣ ಸಾದಾರಣ ಮೈಕಟ್ಟು ೫೪ ಅಂಗುಲ, ಪ್ರತಿಯೊಬ್ಬರ ಕೈಯಲ್ಲಿ ಅವರಷ್ಟೇ ಎತ್ತರದ ಒಣ ಕೋಲಿನ ಆಯುಧ ಕಾಲಿನಲ್ಲಿ ಹವಾಯ್ ಚಪ್ಪಲಿ, ಅದರಲ್ಲೊಂದು ಈಗಲೋ ಆಗಲೋ ಜೀವಬಿಡುವಂತಿತ್ತು, ದೊಗಲೆ ಶರ್ಟು ಅಲ್ಲಲ್ಲಿ ಗಾಳಿಯಾಡಲು ಸಣ್ಣ ತೂತು, ಮೊಣಕಾಲು ಉದ್ದ ದೊಗಲೆ ಚಡ್ಡಿ, ಬಾಯಿ ಖರ್ಚಿಗೆ ಜೇಬಿನಲ್ಲಿ ಸುಟ್ಟ ಗೀರು ಬೀಜ, ತಲೆಗೆ ಕ್ಯಾಪ್,...